ಗರ್ಭದ ಮೌನ

ಗರ್ಭದ ಮೌನ
Updated on: 

ತಂತ್ರಜ್ಞಾನ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಇಂದು ನಮ್ಮ ಜೀವನ ಶೈಲಿಯ ಮೇಲೆ ಅಗಾಧ ಪ್ರಭಾವ ಬೀರಿದೆ. ಈ ಪ್ರಭಾವ ಅದೆಷ್ಟು ಸಕಾರಾತ್ಮಕವಾಗಿದೆಯೋ ಅಷ್ಟೇ ನಕಾರಾತ್ಮಕ ಪರಿಣಾಮಗಳನ್ನೂ ಬೀರಿದೆ. ಇದರಿಂದ ತಲೆದೋರಿದ ವಿವಿಧ ಸಮಸ್ಯೆಗಳಲ್ಲಿ ಬಂಜೆತನವೂ ಒಂದು.
ಬಂಜೆತನ ಎಂದರೆ ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದು, ಗರ್ಭಧಾರಣೆ ಸಾಧ್ಯವಾಗದೆ ಇರುವ ಸ್ಥಿತಿ. ಅಂದಹಾಗೆ, ಈ ಪ್ರಕರಣಗಳಲ್ಲಿ ಶೇ.50ರಷ್ಟು ಪುರುಷರ ಸಮಸ್ಯೆ ಕಾರಣವಾದರೆ, ಶೇ.50ರಷ್ಟು ಮಹಿಳೆಯರಲ್ಲಿನ ಸಮಸ್ಯೆ ಕಾರಣ. ಬದಲಾಗುತ್ತಿರುವ ಜೀವನ ಶೈಲಿಯೇ ಇದಕ್ಕೆ ಮೂಲ ಕಾರಣ.
ಪುರುಷ ಬಂಜೆತನ
ಬದಲಾದ ಜೀವನ ಶೈಲಿಯಿಂದಾಗಿ ವ್ಯಕ್ತಿಯ ಹವ್ಯಾಸಗಳೂ ಭಿನ್ನವಾಗುತ್ತವೆ. ಇದರಿಂದಾಗಿ ಆತನ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿಗಳ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದೆ. ವಿಷಕಾರಿ ಪದಾರ್ಥಗಳು, ಒತ್ತಡ, ವಯಸ್ಸು, ಡಯೆಟ್ ಅಭ್ಯಾಸಗಳು, ದೇಹದ ತೂಕ ಹಾಗೂ ಅತಿಯಾದ ಸಿಗರೇಟು, ಆಲ್ಕೋಹಾಲ್ ಮತ್ತು ಕೆಫಿನ್ ಸೇವನೆಯಂಥ ಅಭ್ಯಾಸಗಳಿಂದ ಉತ್ತಮ ಗುಣಮಟ್ಟದ ವೀರ್ಯ ಉತ್ಪಾದನೆಯಾಗುವುದು ಸಾಧ್ಯವಾಗುವುದಿಲ್ಲ. ಅಲ್ಲದೆ ವೀರ್ಯದ ಗುಣಮಟ್ಟ ಕ್ಷೀಣಿಸಿರುತ್ತದೆ. ಇದು ಪುರುಷ ಬಂಜೆತನಕ್ಕೆ ಕಾರಣ.
ಅಲ್ಲದೆ, ತೀವ್ರತರನಾದ ರಾಸಾಯನಿಕಗಳ ಪ್ರಭಾವಕ್ಕೆ ಒಳಪಟ್ಟಲ್ಲಿ, ಅದರಲ್ಲೂ ಸೀಸ, ಪಾದರಸ, ಓಜೋನ್, ನೈಟ್ರೋಜೆನ್ ಡಯಾಕ್ಸೈಡ್ ಹಾಗೂ ಸಲ್ಫರ್ ಡಯಾಕ್ಸೈಡ್‌ನಂಥ ಅಂಶಗಳ ಪ್ರಭಾವ ಹೆಚ್ಚಾದಲ್ಲಿ ಮನುಷ್ಯನ ವೀರ್ಯ ಸಾಮರ್ಥ್ಯ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತದೆ.
ಮಹಿಳೆಯರಲ್ಲಿ ಬಂಜೆತನ
ಹೆಚ್ಚು ಕಲುಶಿತ ವಾತಾವರಣವು ಮಹಿಳೆಯರಲ್ಲಿ ಗರ್ಭಪಾತ, ಅಪೂರ್ಣ ಬೆಳವಣಿಗೆಯ ಶಿಶುವಿನ ಜನನ, ಮೃತ ಶಿಶುವಿನ ಜನನ ಹಾಗೂ ಸತತ ಗರ್ಭಪಾತದಂಥ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಮಹಿಳೆಯರ ದೈಹಿಕ ಹಾಗೂ ಮಾನಸಿಕ ಒತ್ತಡಗಳೆರಡೂ ಬಂಜೆತನ ಸೃಷ್ಟಿಸುತ್ತದೆ. ವಾರಕ್ಕೆ 32 ಗಂಟೆಗಳಿಗೂ ಅಧಿಕ ಕಾಲ ಕೆಲಸ ಮಾಡುವಂಥ ಮಹಿಳೆಯರಿಗೆ ಗರ್ಭವತಿಯಾಗಲು 16ರಿಂದ 32 ಗಂಟೆ ಕೆಲಸ ಮಾಡುವಂಥ ಮಹಿಳೆಯರಿಗಿಂತಲೂ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಶಿಶು ಜನನ ಸಾಧ್ಯವಾಗುತ್ತದೆ. ಆದರೂ, ಮೃತ ಶಿಶುವಿನ ಜನನದಂಥ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ದೇಹತೂಕ
ವಯಸ್ಸಿನ ಕಾರಣ ಹೊರತಾಗಿ ಆಹಾರ ಸೇವನೆಯ ಅಭ್ಯಾಸಗಳು ಹಾಗೂ ದೇಹದ ತೂಕವೂ ಗಣನೀಯ ಪರಿಣಾಮ ಬೀರುತ್ತದೆ. ಅಧಿಕ ದೇಹತೂಕ ಹೊಂದಿದಲ್ಲಿ ಮಹಿಳೆಯರ ಗರ್ಭದಲ್ಲಿ ಅಂಡಾಣುವಿನ ಉತ್ಪಾದನೆಗೆ ತೊಡಕಾಗುತ್ತದೆ. ಪುರುಷರಲ್ಲಿ ದೇಹದ ತೂಕ ಹೆಚ್ಚಾದಲ್ಲಿ ವೀರ್ಯದ ಸಾಮರ್ಥ್ಯ ಕುಸಿಯುವಂತಾಗುತ್ತದೆ.
ಮೊಬೈಲ್ ಫೋನ್‌ಗಳು
ಇತ್ತೀಚಿನ ಕೆಲ ಅಧ್ಯಯನಗಳ ಪ್ರಕಾರ, ಸೆಲ್‌ಫೋನ್‌ಗಳು ಪುರುಷರಲ್ಲಿ ಸಂತಾನೋತ್ಪತ್ತಿ ಕ್ಷೀಣಿಸಲು ಪ್ರಮುಖ ಪಾತ್ರ ವಹಿಸುತ್ತಿವೆ. ಸೆಲ್ಯುಲಾರ್ ಡಿವೈಸ್‌ಗಳಿಂದ ನಿರಂತರ ಹೊರ ಬರುವ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ವೇವ್‌ಗಳಿಂದಾಗಿ ವೀರ್ಯ ಗುಣಮಟ್ಟ ಕಳೆದುಕೊಳ್ಳುತ್ತಿದೆ.

ವಿವಾಹ ವಯಸ್ಸು
ಶೈಕ್ಷಣಿಕ ಹಾಗೂ ವೃತ್ತಿಪರತೆಯ ಕಾರಣಗಳಿಂದಾಗಿ ಇಂದು ಪುರುಷ ಮತ್ತು ಮಹಿಳೆಯರು ತಮ್ಮ ಮದುವೆಯನ್ನು ಮುಂದೂಡುತ್ತಿದ್ದಾರೆ. ಆದರೆ, ಬಹುತೇಕರಿಗೆ ಈ ರೀತಿ ವರ್ಷಗಳನ್ನು ಮುಂದೂಡುತ್ತಿರುವುದರಿಂದ ತಮ್ಮಲ್ಲಿನ ಸಂತಾನೋತ್ಪತ್ತಿ ಶಕ್ತಿಯೂ ಕಡಿಮೆಯಾಗುತ್ತಿದೆ ಎಂಬುದರ ಅರಿವು ಇಲ್ಲದಂತಾಗಿರುತ್ತದೆ. ಪುರುಷರಿಗೆ ವಯಸ್ಸಾದಂತೆ ವೀರ್ಯ ಉತ್ಪಾದನೆಯ ಶಕ್ತಿ ಕ್ಷೀಣಿಸುತ್ತದೆ. 40 ವರ್ಷ ದಾಟಿದ ಮೇಲೆ ಡಿಎನ್‌ಎ ಹಾನಿಗೊಳಗಾಗುತ್ತಿರುತ್ತದೆ.
ಮಹಿಳೆಯರಲ್ಲಿ 30 ವರ್ಷಕ್ಕಿಂತ ಕೆಳಗಿನವರಲ್ಲಿ ಸಂತಾನೋತ್ಪತ್ತಿಯ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಆದರೆ, 36 ವರ್ಷ ದಾಟಿದ ನಂತರ ಇದೇ ಸಾಮರ್ಥ್ಯ ಶೇ.41ರಷ್ಟಕ್ಕೆ ಕುಸಿದಿರುತ್ತದೆ. 35 ವರ್ಷ ದಾಟಿದ ಬಳಿಕ ಗರ್ಭವತಿಯಾಗುವ ಸಾಧ್ಯತೆ ಹಾಗೂ ಗರ್ಭಧಾರಣೆಯನ್ನು ಕಾಪಾಡಿಕೊಳ್ಳುವುದು- ಎರಡೂ ಕಷ್ಟ ಸಾಧ್ಯವಾಗುತ್ತದೆ.


= ಡಾ. ಶ್ವೇತಾ ಪ್ರಮೋದ್, ತಾಮರಾ ಹಾಸ್ಪಿಟಲ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com