

ಬಿಸಿಲ ಬೇಗೆ ಈ ಬಾರಿ ತುಸು ಹೆಚ್ಚೇ ಇದೆ. ಬಹಳ ಮಂದಿ ಈ ಬಿಸಿಲಿನ ಧಗೆ ಕಂಡು ಯಾವಾಗ ಮುಗಿಯುತ್ತೆ ಬೇಸಿಗೆ ಅಂತ ಶಪಿಸತೊಡಗಿದ್ದಾರೆ. ಅದಿರಲಿ. ಬೇಸಿಗೆಯಲ್ಲಿ ಕಾಯಿಲೆಗಳು ಹೆಚ್ಚು ಹರಡುವುದು ಸಾಮಾನ್ಯ. ಅದರಲ್ಲೂ ಈ ಬಿಸಿಲಿನ ಬೇಗೆಗೆ ಚರ್ಮವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ತುಸು ಎಚ್ಚರ ತಪ್ಪಿದರೆ ಚರ್ಮರೋಗ ಅಮರಿಕೊಂಡು ಚರ್ಮ ಅಕ್ರಾಳ- ವಿಕ್ರಾಳವಾದರೂ ಅಚ್ಚರಿಪಡಬೇಕಿಲ್ಲ.
ದದ್ದು, ತುರಿಕೆ, ಮೊಡವೆ ಸೇರಿದಂತೆ ಮೊದಲಾದವು ಬಿರು ಬೇಸಿಗೆಯಲ್ಲಿ ದುಪಳಿ ಮಾಡುವ ಸಾಧ್ಯತೆ ಅಧಿಕ. ಆ ಪೈಕಿ ಹೀಟ್ ರ್ಯಾಶ್ ಪ್ರಮುಖವಾದದ್ದು.
ಅಕಸ್ಮಾತ್ ಹೀಟ್ ರ್ಯಾಶ್ ಬಂತೆಂದರೆ ಏನು ಮಾಡಬೇಕು ಅಂತೀರಾ? ಭಯಪಡದೆ ಉಪಶಮನಕ್ಕೆ ಮಾರ್ಗ ಕಂಡುಕೊಳ್ಳಬೇಕಷ್ಟೇ. ಹಾಗಂತ ವೈದ್ಯರ ಬಳಿಗೆ ಹೋಗಬೇಕು ಅಂತೇನಿಲ್ಲ. ಮನೆಯಲ್ಲಿ ಸಿಗುವ ವಸ್ತು, ಪದಾರ್ಥಗಳಿಂದ ಹೀಟ್ ರ್ಯಾಶ್ ಅನ್ನು ನಿಯಂತ್ರಿಸಿಕೊಳ್ಳಬಹುದು. ಇದರಿಂದ ದುಡ್ಡು ಉಳಿಯುತ್ತೆ. ಅಲ್ಲದೆ, ಇವು ನೈಸರ್ಗಿಕವಾಗಿರುವುದರಿಂದ ಯಾವುದೇ ಅಡ್ಡಪರಿಣಾಮವೂ ಇರಲ್ಲ. ಅದಕ್ಕಾಗಿ ಈ ಕೆಳಕಂಡ ಸಲಹೆ ಪಾಲಿಸಿದರೆ ಆಯಿತು. ಹೀಟ್ರ್ಯಾಶ್ ನಿಮ್ಮ ಹತ್ತಿರವೂ ಸುಳಿಯಲಾರದು.
ಹೀಗೆ ಮಾಡಿ...
ಹಿಟ್ ರ್ಯಾಶ್ ಆದ ಸ್ಥಳದಲ್ಲಿ ಐಸ್ಕ್ರಿಮ್ ಅನ್ನು ಕೆಲ ಸಮಯ ಇಡಬೇಕು. ಈ ರೀತಿ ದಿನದಲ್ಲಿ ಮೂರ್ನಾಲ್ಕು ಗಂಟೆಗೊಮ್ಮೆ ಹತ್ತು ನಿಮಿಷದಂತೆ ಮಾಡಬೇಕು. ಇದರಿಂದ ಆ ಭಾಗ ತಂಪಾಗುತ್ತದೆ. ಹೀಟ್ ರ್ಯಾಶ್ ಕಾಲ್ಕಿಳುವಂತೆ ಮಾಡುತ್ತದೆ.
ಲೋಳೆಸರ ತಂಪುಕಾರಿ ಅನ್ನೋದರಲ್ಲಿ ಎರಡು ಮಾತಿಲ್ಲ. ಇದು ಹೀಟ್ ರ್ಯಾಶ್ಗೆ ರಾಮಬಾಣ. ಲೋಳೆಸರದ ರಸವನ್ನು ಹೀಟ್ರ್ಯಾಶ್ನ ಜಾಗದಲ್ಲಿ ಲೇಪಿಸಬೇಕು. ದಿನಕ್ಕೆರಡು ಬಾರಿ ಹಚ್ಚಿಕೊಂಡರೆ ಉತ್ತಮ.
ಸ್ನಾನ ಮಾಡಿದ ನಂತರ ಹೀಟ್ ರ್ಯಾಶ್ನ ಭಾಗವನ್ನು ಸೋಡಾ ಪುಡಿ ಹಾಕಿ ಬಿಸಿ ನೀರಿನಿಂದ ತೊಳೆಯಬೇಕು. ಇದೂ ಹೀಟ್ ರ್ಯಾಶ್ನಿಂದ ಮುಕ್ತಿ ಪಡೆಯಲು ಸುಲಭ, ಸರಳ ಉಪಾಯ.
ಸ್ನಾನ ಮಾಡಿದ ನಂತರ ನೈಸರ್ಗಿಕ ಪೌಡರ್ ಅನ್ನು ಹೀಟ್ ರ್ಯಾಶ್ನ ಭಾಗಕ್ಕೆ ಲೇಪಿಸಬೇಕು. ಈ ರೀತಿ ದಿನದಲ್ಲಿ ಮೂರ್ನಾಲ್ಕು ಬಾರಿ ಮಾಡಬೇಕು. ಈ ಪೌಡರ್ ದೇಹವನ್ನು ತಂಪಾಗಿಡಲು ಸಹಕಾರಿ. ಆದರೆ, ರಾಸಾಯನಿಕ ಮಿಶ್ರಿತ ಪೌಡರ್ ಅಪಾಯಕಾರಿ.
ಮನೆಯಲ್ಲಿನ ಯಾವುದಾದರೂ ಹಿಟ್ಟನ್ನು (ಗೋದಿ, ಜೋಳ, ಅಕ್ಕಿ) ನೀರಿನೊಂದಿಗೆ ಮಿಶ್ರಣ ಮಾಡಿ ಅದನ್ನು ಹೀಟ್ ರ್ಯಾಶ್ನ ಭಾಗಕ್ಕೆ ಹಚ್ಚಿ 5 ನಿಮಿಷ ಬಿಡಬೇಕು. ಬಳಿಕ ತಣ್ಣೀರಿನಿಂದ ಆ ಭಾಗವನ್ನು ತೊಳೆಯಬೇಕು.
ಹೀಗೆ ಮನೆಯಲ್ಲೇ ಇದಕ್ಕೆ ಮದ್ದು ಕಂಡುಕೊಳ್ಳುವುದರಿಂದ ವೈದ್ಯರಿಂದ ದೂರ ಇರಬಹುದು. ಜತೆಗೆ ಜೇಬಿಗೂ ಕತ್ತರಿ ಬೀಳುವುದಿಲ್ಲ.
= ಎಂ. ಅರಳಿ