ನೀವು ನಕ್ಕರೆ ಬದುಕು ಸಕ್ಕರೆ

ನಗು ಎಂಬ ಎರಡಕ್ಷರದಲ್ಲಿ ನೂರೆಂಟು ನೆಮ್ಮದಿಯಿದೆ. ನಗು ಸುಂದರ, ಆಕರ್ಷಕ. ನೋವನ್ನು ಮರೆಸುವ ದಿವ್ಯೌಷಧ. ನಗುವಿನಿಂದ ಜಗತ್ತನ್ನು ಗೆಲ್ಲಬಹುದು. ಮಂದಹಾಸ ತುಂಬಿದ ನಗುಮುಖ ನಮ್ಮೊಳಗಿನ ಸಂತುಷ್ಟ ಮನಸ್ಸಿನ ಆನಂದಮಯ ಸ್ಥಿತಿ ಸೂಚಿಸುತ್ತದೆ.
ಆರೋಗ್ಯದ ದೃಷ್ಟಿಯಿಂದ ನಗುವುದೊಳಿತು. ನಗುವುದರಿಂದ ಶರೀರದ ಸ್ನಾಯುಗಳು ಸಡಿಲಗೊಳ್ಳುತ್ತವೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದೇಹದ ಅಂಗಾಂಗಗಳಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ. ಅದರಲ್ಲೂ ಮುಖ್ಯವಾಗಿ ಎದೆ ಮತ್ತು ಹೊಟ್ಟೆಯೊಳಗಿನ ಸ್ನಾಯುಗಳು ಆಳವಾದ ಉಸಿರಾಟದೊಂದಿಗೆ ನಗುವು ಸೇರಿ ವಪೆಯಲ್ಲಿ ಹೆಚ್ಚಿನ ಸಡಿಲತೆಯನ್ನುಂಟು ಮಾಡುತ್ತದೆ. ನಗುವು ಅಳವಾದ ಉಸಿರಾಟಕ್ಕೆ ಅನುವು ಮಾಡಿ ಹೆಚ್ಚಿನ ಆಮ್ಲಜನಕ ರಕ್ತದೊಂದಿಗೆ ಸೇರಿ ದೇಹದ ಎಲ್ಲ ಭಾಗಗಳಿಗೆ ದೊರೆಯುವಂತೆ ಮಾಡುತ್ತದೆ. ನಗು ಧ್ವನಿಪೆಟ್ಟಿಗೆಯಿಂದ ಹಿಡಿದು ಅಂಗಾಲು ಸ್ನಾಯುಗಳವರೆಗೆ ಉಂಟುಮಾಡುವ ಸಡಿಲತೆಯಿಂದ ದೇಹ ಚೈತನ್ಯದಿಂದ ಕೂಡಿರುತ್ತದೆ. ಈಗಿನ ಒತ್ತಡಯುಕ್ತ ಜಗತ್ತಿಗೆ ನಗು ಬಹಳ ಮುಖ್ಯ.
ವಯಸ್ಸನ್ನು ಮರೆಮಾಚುತ್ತದೆ...
ಜರ್ಮನ್ ತಜ್ಞರ ಪ್ರಕಾರ, ಸೌಂದರ್ಯ ಹೆಚ್ಚಿಸಿಕೊಳ್ಳಲು, ವಯಸ್ಸನ್ನು ಮರೆಮಾಚಲು ಫೇಸ್ ಸ್ಲಿಫ್ಟ್ ಅಥವಾ ಕ್ರೀಂಗಳ ಮೊರೆ ಹೋಗುವ ಬದಲು ಸಣ್ಣದಾದ ನಗು, ಮುಖದ ಮೇಲಿದ್ದರೆ ಸಾಕು. ನೀವು ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸುತ್ತೀರ. ಹಾಗೆಯೇ ಯಾವಾಗಲೂ ಸಂತೋಷವಾಗಿದ್ದವರು ಆಕರ್ಷಕವಾಗಿಯೂ ಕಾಣುತ್ತಾರೆ.
ನಗುವಿನಿಂದ ನೋವು ಮಾಯ
ಆಕ್ಸ್ಫರ್ಡ್ ವಿವಿಯ ಸಂಶೋಧನೆ ಪ್ರಕಾರ, ಜೋರಾಗಿ ನಕ್ಕರೆ ಅದು ಮೆದುಳಿನಲ್ಲಿ ಎಂಡಾರ್ಫಿನ್ ರಾಸಾಯನಿಕ ಬಿಡುಗಡೆಗೊಳಿಸಿ, ನೋವು ನಿವಾರಕದಂತೆ ಕೆಲಸ ಮಾಡುತ್ತದೆ. ನಗುವುದು ಹೆರಾಯಿನ್ನಂಥ ನೋವು ನಿವಾರಕದಂತೆ ಪರಿಣಾಮ ತರುತ್ತದೆ. ನಗು ದೇಹಕ್ಕೆ ಒಳ್ಳೆಯ ವ್ಯಾಯಾಮ. ಆಯಾಸಗೊಳ್ಳದೆ ಆರಾಮವಾಗಿ ಮಾಡುವ ಒಂದೇ ವ್ಯಾಯಾಮವೆಂದರೆ ಅದು ನಗು!
ನಕ್ಕು ನೂರ್ಕಾಲ ಬಾಳಿ
- ವೈದ್ಯರೂ ರೋಗಿಗಳಿಗೆ ಚಿಂತೆ ಬಿಟ್ಟು ನಗಲು ಸೂಚಿಸುತ್ತಾರೆ. ಒತ್ತಡ ನಿವಾರಣೆಗೆ ಬಹಳಷ್ಟು ಮಂದಿ ಮುಂಜಾನೆ ನಗುವ ತರಗತಿಗಳಿಗೆ ಹೋಗುತ್ತಾರೆ. ಇಂಥ ತರಗತಿಗಳಲ್ಲಿ ಎಲ್ಲರೂ ಸೇರಿ ವಿವಿಧ ಶೈಲಿಯಲ್ಲಿ ನಗುತ್ತಾರೆ. ನಗುವಿನಿಂದಾಗಿ ದೀರ್ಘಕಾಲ ಬದುಕಬಹುದು ಎಂಬುದು ಬಹಳಷ್ಟು ಮಂದಿಯ ನಂಬಿಕೆ ಮತ್ತು ಕಾಣದ ಸತ್ಯ.
- ನಗು ಅಥವಾ ತಮಾಷೆಯಿಂದ ಮನಸ್ಸು ಯಾವಾಗಲೂ ಶಾಂತ. ಒತ್ತಡ, ಚಿಂತೆ, ಕೋಪ, ಹತಾಶೆ ಹಾಗೂ ನೋವಿನ ಸಮಸ್ಯೆಗಳು ದೂರ.
- ನಗುವಿನಿಂದ ಧನಾತ್ಮಕ ಮತ್ತು ಪ್ರೋತ್ಸಾಹಕ ಭಾವನೆ ಹೆಚ್ಚುತ್ತದೆ. ಇದರಿಂದ ಭಾವನಾತ್ಮಕ ಮತ್ತು ಮಾನಸಿಕ ಸ್ಥಿರತೆ ಉಂಟಾಗುತ್ತದೆ. ಕೆಲವರು ಕೋಪ ನಿಯಂತ್ರಿಸಲು ನಗುವಿನ ಥೆರಪಿಗೆ ಹೋಗುತ್ತಾರೆ.
- ನಗು ಒಳ್ಳೆಯ ವ್ಯಾಯಾಮ. ನಕ್ಕಾಗ ನಾವು ಸಾಮಾನ್ಯವಾಗಿ ತೆಗೆದುಕೊಳ್ಳುವ ಆಮ್ಲಜನಕಕ್ಕಿಂತ ಹೆಚ್ಚಿನ ಆಮ್ಲಜನಕ ಉಸಿರಾಡುತ್ತೇವೆ. ನಗುವು ಆಮ್ಲಜನಕ ಪಡೆಯುವುದನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಬಡಿತ ಹೆಚ್ಚಾಗಿ ದೇಹದಲ್ಲಿ ರಕ್ತ ಪರಿಚಲನೆಯು ಉತ್ತಮವಾಗುತ್ತದೆ. ಬೆಳಗ್ಗೆ ನಿಷ್ಕಲ್ಮಶ ಗಾಳಿಯಲ್ಲಿ ನಕ್ಕರೆ ನಿಮ್ಮ ಜೀವನದ ಅವಧಿ ಹೆಚ್ಚುತ್ತದೆ.
ಮುತ್ತುಗಳು ನಿಮ್ಮವಾಗಿರಲಿ
ಬಹಳಷ್ಟು ಮಂದಿ ಹಳದಿ ಹಲ್ಲುಗಳಿಂದ ನಗಲು ಹಿಂಜರಿಯುತ್ತಾರೆ. ಈ ಸಮಸ್ಯೆಯಿಂದ ದೂರವಾಗಲು ಇಲ್ಲಿವೆ ಕೆಲವು ಸಲಹೆಗಳು...
- ಕ್ಯಾರೆಟ್, ಸೇಬು, ಕಬ್ಬು, ಸೊಪ್ಪು, ಸ್ಟ್ರಾಬೆರಿ- ಇವುಗಳನ್ನು ಅಗಿದು ತಿನ್ನುವುದರಿಂದ ಹಲ್ಲಿನ ಕೊಳೆ ಕ್ರಮೇಣ ಹೋಗಿ ಬಾಯಿಯ ಸ್ವಾಸ್ಥ್ಯವನ್ನು ಸುಧಾರಿಸುತ್ತದೆ. ನೈಸರ್ಗಿಕವಾಗಿ ಬೆಳ್ಳಗಾಗುವಂತೆ ಮಾಡುತ್ತದೆ.
- ಸಕ್ಕರೆ ಅಂಶವಿಲ್ಲದ ಗಮ್ಗಳನ್ನು ಅಗಿಯುವುದರಿಂದಲೂ ಹಲ್ಲುಗಳು ಶುದ್ಧಗೊಳ್ಳುತ್ತವೆ.
- ಅಜ್ವಾನ ಅಥವಾ ಅದರ ಎಣ್ಣೆಯೂ ಬಾಯಿಯ ಸ್ವಾಸ್ಥ್ಯಕ್ಕೆ ತುಂಬಾ ಪರಿಣಾಮಕಾರಿ. ಹುಳುಕಲ್ಲನ್ನು ನೈಸರ್ಗಿಕವಾಗಿ ನಿವಾರಿಸುವ ಅಂಶ ಇದರಲ್ಲಿದೆ. ಲವಂಗ ಅಥವಾ ಲವಂಗದೆಣ್ಣೆಯೂ ಹೆಚ್ಚು ಪರಿಣಾಮಕಾರಿ.
- ಉಪ್ಪಿನಲ್ಲೂ ಹಲ್ಲಿನ ಹಳದಿ ಹೋಗಿಸುವ ಗುಣವಿದೆ. ಉಪ್ಪನ್ನು ಬಳಸುವುದರಿಂದ ಬಾಯಿಯಲ್ಲಿರುವ ಶೇ.90 ಕ್ರಿಮಿಗಳು ನಾಶವಾಗುತ್ತವೆ. ಬಾಯಿಗೂ ಸೋಂಕು ತಗುಲದಂತೆ ಆರೋಗ್ಯವಾಗಿಡುತ್ತದೆ. ಅಡುಗೆ ಸೋಡವೂ ನೈಸರ್ಗಿಕ ಮೌತ್ವಾಷ್ನಂತೆ ಕೆಲಸ ಮಾಡುತ್ತದೆ.
- ಹಿಂದೆಲ್ಲ ಹಲ್ಲುಗಳು ಗಟ್ಟಿಯಾಗಿರಲಿ ಎಂದು ಬೇವಿನ ಕಡ್ಡಿಯನ್ನು ಬಳಸುತ್ತಿದ್ದರು. ಇದು ಈಗಲೂ ಪ್ರಸ್ತುತ. ಬೇವಿನ ಎಣ್ಣೆ ಬೆರೆಸಿದ ಮೌತ್ವಾಶ್ ಬಳಸುವುದರಿಂದ ಸೋಂಕು, ಹುಳುಕಲ್ಲು, ಹುಣ್ಣು ಮುಂತಾದವನ್ನು ನಿವಾರಿಸಬಹುದು.
- ಹೆಚ್ಚು ನೀರು ಕುಡಿದರೆ ದೇಹಕ್ಕೆ ಮಾತ್ರವಲ್ಲ. ಬಾಯಿಯ ಸ್ವಾಸ್ಥ್ಯವೂ ಹೆಚ್ಚು ಕಾಲವಿರುತ್ತದೆ. ಹಲ್ಲುಗಳ ಮಧ್ಯ ಉಳಿದುಕೊಂಡ ಆಹಾರವನ್ನು ಹೋಗಿಸಿ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.
- ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿದರೆ ಬಿಳುಪು ಹೆಚ್ಚುತ್ತದೆ.
- ಸ್ವಲ್ಪ ನೀರಿಗೆ ನಿಂಬೆ ರಸ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಮತ್ತು ನಿಂಬೆ ಸಿಪ್ಪೆಯಿಂದ ಹಲ್ಲುಗಳನ್ನು ನಯವಾಗಿ ಉಜ್ಜುವುದರಿಂದ ಹೊಳೆಯುವ ಹಲ್ಲುಗಳನ್ನು ನಿಮ್ಮದಾಗುತ್ತವೆ.
-ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


