ಪ್ರೆಗ್ನೆನ್ಸಿಯಲ್ಲಿ ಪ್ರೆಶರ್ ಬೇಡ

ಬಹಳ ಹೊತ್ತು ಕೆಲಸ, ಅತಿಯಾದ ಆಲೋಚನೆ... ಇವು ಒತ್ತಡದ ಕೇಂದ್ರಬಿಂದುಗಳು. ಹಾರ್ಮೊನ್ಗಳ ಬದಲಾವಣೆಗೂ ಕಾರಣವಾಗುವಂಥವು. ಅದರಲ್ಲೂ ಗರ್ಭಿಣಿಯರಲ್ಲಿ ಮನಃಸ್ಥಿತಿ ಬದಲಾಗುತ್ತಲೇ ಇರುತ್ತವೆ. ಇದರಿಂದ ಒತ್ತಡದ ಮಟ್ಟ ಗಡಿ ದಾಟಬಹುದು. ಅತಿಯಾದ ಒತ್ತಡವಿದ್ದರೆ ತಾಯಿ ಮತ್ತು ಭ್ರೂಣಕ್ಕೆ ಹಲವು ಸಮಸ್ಯೆಗಳುಂಟು. ತಾಯಿಗೆ ಆತಂಕ, ಖಿನ್ನತೆ, ನಿತ್ರಾಣವಾದ ಅನುಭವ, ಅಲರ್ಜಿಗಳ ದಾಳಿ ಇತ್ಯಾದಿ. ಇದರಿಂದ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿ, ದೇಹದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ಚಿಕ್ಕ ಗಾತ್ರದ ಮಕ್ಕಳಾಗಿರುವ ನಿದರ್ಶನಗಳಿವೆ. ಅದೃಷ್ಟವಶಾತ್ ಈ ಒತ್ತಡ ಸಂಬಂಧಿ ಸಮಸ್ಯೆಗಳನ್ನು ದೂರಮಾಡಲು ವಿಭಿನ್ನ ವಿಧಾನಗಳಿವೆ. ಅಂತಿಮವಾಗಿ ಗರ್ಭಿಣಿ ತನ್ನ ಗರ್ಭಕ್ಕೇ ಪ್ರಥಮ ಆದ್ಯತೆ ನೀಡಬೇಕು. ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ಹೆಣಗುವುದಕ್ಕಿಂತ ಅವುಗಳನ್ನು ದೂರವಿಡುವುದೇ ಲೇಸು.
ಒತ್ತಡದ ಲಕ್ಷಣಗಳು
* ನಿದ್ರಾಹೀನತೆ, ಪದೇಪದೆ ತಲೆನೋವು, ಹಸಿವು ಇಲ್ಲದಿರುವುದು, ಅತಿಯಾಗಿ ಆಹಾರ ಸೇವನೆ. ಒತ್ತಡದಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಥೈರಾಯ್ಡ್ ಸಮಸ್ಯೆಗಳೂ ಕಾಡುತ್ತವೆ. ಗರ್ಭಾವಸ್ಥೆಯಲ್ಲಿ ಕೆಲಸದ ಒತ್ತಡ ಹಲವುಪಟ್ಟು ಹೆಚ್ಚಲು ಇವು ಕಾರಣವಾಗುತ್ತವೆ.
* ಹಾರ್ಮೋನುಗಳ ಬದಲಾವಣೆಯಿಂದ ಮನಃಸ್ಥಿತಿಯಲ್ಲಿ ಪದೇಪದೆ ಬದಲಾವಣೆಗಳಾಗಿ ಒತ್ತಡಕ್ಕೆ ಕಾರಣವಾಗುತ್ತವೆ. ಪ್ರಮುಖ ವಿಷಯಗಳನ್ನು ಸರಿಯಾಗಿ ವಿಶ್ಲೇಷಿಸಲು ಕಷ್ಟವಾಗಿ ಒತ್ತಡ ಹೆಚ್ಚಬಹುದು.
* ಹೊಟ್ಟೆ ತೊಳೆಸುವುದು, ಮಲಬದ್ಧತೆ, ಬೆನ್ನುನೋವು ಅಥವಾ ಆಯಾಸಗಳಂಥ ದೈಹಿಕ ಸಮಸ್ಯೆಗಳು, ದೈಹಿಕ ಕ್ಷಮತೆ ಕೆಲಸದ ಮೇಲೆ ಪರಿಣಾಮ ಬೀರುತ್ತವೆ.
ಒತ್ತಡ ಮೀರುವುದು ಹೇಗೆ?
* ಒತ್ತಡಕ್ಕೆ ಕಾರಣಗಳನ್ನು ತಿಳಿಯಬೇಕು. ತನ್ನ ಜತೆಗಾರನ- ವೈದ್ಯರ- ಸ್ನೇಹಿತರೊಂದಿಗೆ ಚರ್ಚಿಸಬಹುದು.
* ಕೆಲಸದ ವೇಳಾಪಟ್ಟಿ, ರಜೆ ಇತ್ಯಾದಿಗಳನ್ನು ಬಹಳ ಮುನ್ನವೇ ಯೋಜಿಸಿಕೊಳ್ಳಬೇಕು.
* ಆರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ ನಿದ್ರಾಹೀನತೆಯನ್ನು ಬಗೆಹರಿಸಬಹುದು. ನಿದ್ರೆ, ವಿಶ್ರಾಂತಿಗಳು ಸಾಕಷ್ಟು ಸಿಕ್ಕರೆ ಒತ್ತಡ ಕಡಿಮೆಯಾಗುತ್ತದೆ.
* ಸಣ್ಣಪುಟ್ಟ ವಿಷಯಗಳೂ ಮುಖ್ಯ. ತನಗೆ ವಿಶ್ವಾಸವಿರುವ ಜನರಿಂದ ನೆರವನ್ನು ಪಡೆಯಲು ಕಲಿಯಬೇಕು. ಉದಾ: ಮನೆಗೆಲಸ, ವೈದ್ಯರ ಬಳಿ ಹೋಗುವುದು ಇತ್ಯಾದಿ.
* ಆಗಲ್ಲ, ಸಾಧ್ಯವಿಲ್ಲ ಎನ್ನುವುದನ್ನು ರೂಢಿಸಿಕೊಳ್ಳಬೇಕು. ಗರ್ಭಾವಸ್ಥೆಯನ್ನು ಕಾರಣವಾಗಿ ಕೊಡಿ, ಅದರಲ್ಲಿ ತಪ್ಪಿಲ್ಲ. ಖಿನ್ನತೆಯ ಸಣ್ಣ ಸುಳಿವು ಸಿಕ್ಕೊಡನೆ ಆರೋಗ್ಯ ಒದಗಿಸುವವರನ್ನು ಸಂಪರ್ಕಿಸಬೇಕು.
* ಶರೀರಕ್ಕೆ ಮಸಾಜ್ ಆರಾಮ ನೀಡುತ್ತದೆ. ಆದರೆ ತಜ್ಞರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.
* ನಗು ಒತ್ತಡ ಇಳಿಸಲು ಅತ್ಯುತ್ತಮ ಟಾನಿಕ್. ಧನಾತ್ಮಕ ಆಲೋಚನೆಗಳು ಒತ್ತಡವನ್ನು ಕಡಿಮೆ ಮಾಡುತ್ತವೆ.
* ಸಹೋದ್ಯೋಗಿಗಳು ಅಥವಾ ಬಾಸ್ ಜತೆಯೂ ಚರ್ಚಿಸಬಹುದು. ಧನಾತ್ಮಕ ಭಾವಗಳು ಒತ್ತಡ ಸಂಬಂಧಿ ಸಮಸ್ಯೆಗಳನ್ನು ಸಾಕಷ್ಟು ಕಡಿಮೆ ಮಾಡುತ್ತವೆ.ಟಿ
-ಡಾ. ಪೂರ್ಣಿಮಾ ರಾಮಕೃಷ್ಣನ್, ಸ್ತ್ರೀರೋಗ ತಜ್ಞರು,
ಅಪೊಲೊ ಕ್ರೇಡಲ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


