

ಬೀಜಿಂಗ್: ಚೀನಾದಲ್ಲಿ ಇದೇ ಮೊದಲ ಬಾರಿಗೆ ಸರ್ಜಿಕಲ್ ರೋಬೋಟ್ ಯಶಸ್ವಿ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದೆ.
ಗುವಾಂಗ್ಝೌ ನಗರದಲ್ಲಿರುವ ಸನ್ ಯಾತ್-ಸೇನ್ ವಿವಿಯ ಆಸ್ಪತ್ರೆಯಲ್ಲಿ ಆರು ವರ್ಷದ ಬಾಲಕನಿಗೆ ನವೆಂಬರ್ 16 ರಂದು ಸರ್ಜಿಕಲ್ ರೋಬೋಟ್ ನಿಂದ ಯಶಸ್ವಿ ಕಿಡ್ನಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಪೀಪಲ್ಸ್ ಡೈಲಿ ವರದಿ ಮಾಡಿದೆ. ಚೀನಾದಲ್ಲಿ ಬಾಲಕನಿಗೆ ನಡೆದ ಮೊದಲ ರೋಬೋಟಿಕ್ ಸರ್ಜರಿ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆರು ವರ್ಷದ ಬಾಲಕನಿಗೆ ಮೂತ್ರ ಕೋಶದ ನಾಳ ನಿಷ್ಕ್ರಿಯವಾಗಿದ್ದರಿಂದ ಎಡ ಭಾಗದ ಕಿಡ್ನಿಯಲ್ಲಿ ಹೈಡ್ರೊನೆಫ್ರೊಸಿಸ್ ಸಮಸ್ಯೆ ಕಾಣಿಸಿಕೊಂಡಿತ್ತು. ಬಾಲಕ ರೊಬೋಟಿಕ್ ಸರ್ಜರಿಗೆ ಒಳಪಡಲು ಸಮರ್ಥನಾಗಿದ್ದರಿಂದ ಆತನಿಗೆ ರೊಬೋಟಿಕ್ ಮನಿಪ್ಯುಲೇಟರ್ಗಳನ್ನು ಬಳಸಿ ಶಸ್ತ್ರ ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು.
ರೊಬೋಟಿಕ್ ಶಸ್ತ್ರಚಿಕಿತ್ಸೆ ವೇಳೆ, ಶಸ್ತ್ರಚಿಕಿತ್ಸಕರು ಪರದೆಯ ಹಿಂದೆ ಕುಳಿತು ಯಂತ್ರವನ್ನು ನಿಯಂತ್ರಿಸುತ್ತಿದ್ದರು. ನಿಖರವಾಗಿ ಕಾರ್ಯನಿರ್ವಹಣೆ ಮಾಡಿರುವುದಕ್ಕೆ ಸರ್ಜಿಕಲ್ ರೋಬೋಟ್ ಗೆ ಪ್ರಶಂಸೆ ವ್ಯಕ್ತವಾಗಿದೆ. ಕೇವಲ ಎರಡು ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಮುಕ್ತಾಯಗೊಂಡಿದೆ. ಇದು ಸಾಮಾನ್ಯವಾಗಿ ನಡೆಯುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಿಗಿಂತಲು ಒಂದು ಗಂಟೆ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡಿದೆ ಎಂದು ತಿಳಿದುಬಂದಿದೆ.