

ಲಂಡನ್: ಅತಿಯಾದ ಸ್ಮಾರ್ಟ್ ಪೋನ್ ಬಳಕೆ ಮತ್ತು ಸೆಲ್ಪಿ ಪ್ರಿಯರಿಗೆ ಇಲ್ಲೊಂದು ಆಘಾತಕಾರಿ ಮಾಹಿತಿಯಿದೆ. ಹೆಚ್ಚೆಚ್ಚು ಸೆಲ್ಫೀ ತೆಗೆದುಕೊಳ್ಳುವುದರಿಂದ ಚರ್ಮ ಕಾಂತಿಹೀನವಾಗಿ, ವಯಸ್ಸಾದಂತೆ ಕಾಣುತ್ತದೆ ಎಂದು ಲಂಡನ್ ನ ಪ್ರಖ್ಯಾತ ಚರ್ಮ ರೋಗ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿನಿತ್ಯ ವಿದ್ಯುದ್ಕಾಂತೀಯ ವಿಕಿರಣಗಳು ಮುಖದ ಮೇಲೆ ಬೀಳುವುದರಿಂದ ಚರ್ಮಕ್ಕೆ ಹಾನಿಯುಂಟಾಗುತ್ತದೆ, ಹಾಗೆಯೇ ಮುಖದ ಯಾವ ಭಾಗದಲ್ಲಿಟ್ಟುಕೊಂಡು ಹೆಚ್ಚು ಫೋನ್ನಲ್ಲಿ ಮಾತನಾಡುತ್ತಾರೋ ಅಂತಹ ಭಾಗದ ಚರ್ಮ ಕಳಾಹೀನವಾಗಿ ಹೆಚ್ಚಿನ ಹಾನಿಗೊಳಗಾಗುತ್ತದೆ, ಜೊತೆಗೆ ಚರ್ಮ ಬೇಗ ಸುಕ್ಕು ಹಿಡಿಯುತ್ತದೆ ಎಂದು ಲಂಡನ್ ನ ಹಾರ್ಲೆ ಸ್ಟ್ರೀಟ್ ನ ಲಿನಿಕಾ ಸ್ಕಿನ್ ಕ್ಲಿನಿಕ್ ನ ಚರ್ಮ ವೈದ್ಯರಾದ ಸಿಮೋನ್ ಸೋಲಂಕಿ ಹೇಳಿದ್ದಾರೆ.
ಯಾವುದೇ ಎಣ್ಣೆ ಅಥವಾ ಕ್ರೀಮ್ ಗಳನ್ನು ಹಚ್ಚಿಕೊಳ್ಳುವುದರಿಂದ ವಿಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಡೆಯಲು ಆಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪುರುಷನಿಗಿಂತ ಮಹಿಳೆಯ ಚರ್ಮ ಹೆಚ್ಚು ಸೂಕ್ಷ್ಮವಾಗಿದ್ದು, ಅತೀ ಶೀಘ್ರವಾಗಿ ಮಹಿಳೆಯರ ಚರ್ಮ ಹಾನಿಗೊಳಗಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಹೀಗಾಗಿ ಸ್ಮಾರ್ಟ್ ಫೋನ್ ಗಳ ತಯಾರಕರು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುವ ವಿದ್ಯುದ್ಕಾಂತೀಯ ವಿಕಿರಣಗಳಿಂದ ರಕ್ಷಿಸುವಂತ ತಂತ್ರಜ್ಞಾನವನ್ನು ಕಂಡು ಹಿಡಿಯಬೇಕೆಂದು ಸಲಹೆ ನೀಡಿದ್ದಾರೆ.