

ಬೆಂಗಳೂರು: ಕೇರಳ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆ ಮತಚಲಾಯಿಸಲು ಬೆಂಗಳೂರಿನಲ್ಲಿ ವಾಸವಿರುವ ಆ ರಾಜ್ಯಗಳ ಮತದಾರರು ತೆರಳಿದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಇಡೀ ಆಯಾ ರಾಜ್ಯಗಳಿಗೆ ತೆರಳುವ ಬಸ್ ಭರ್ತಿಯಾಗಿ ಸಂಚರಿಸಿದವು.
ಚುನಾವಣೆಯಲ್ಲಿ ಮತದಾನ ಮಾಡುವ ಸಲುವಾಗಿ ಭಾನುವಾರ ರಾತ್ರಿ ಇಡೀ ತಮಿಳುನಾಡು, ಕೇರಳ ಮತ್ತು ಪುದುಚೇರಿಗೆ ತೆರಳುವ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯ ದಿನಗಳಿಗಿಂತ ನಿನ್ನೆ ಹೆಚ್ಚಿನ ಸಂಖ್ಯೆಯ ಬಸ್ ಗಳು ಸಂಚರಿಸಿದವು. ಬೆಂಗಳೂರಿನ ಸ್ಯಾಟೆಲೈಟ್ ಬಸ್ ನಿಲ್ದಾಣದಲ್ಲಿ ತಮಿಳುನಾಡಿಗೆ ಸಂಚರಿಸುವ ಬಸ್ ಗಳಿಗಾಗಿ ರಾತ್ರಿ ಇಡೀ ಜನ ಕಾದು ಕುಳಿತು, ಬಸ್ ಗಳು ಬರುತ್ತಿದ್ದಂತೆಯೇ ತಮಿಳುನಾಡಿನತ್ತ ಪ್ರಯಾಣ ಮಾಡಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಮೆಜೆಸ್ಟಿಕ್, ಶಾಂತಿನಗರ, ಜಯನಗರ ಹಾಗೂ ಹೊಸೂರು ರಸ್ತೆಗಳಲ್ಲಿ ಬಸ್‌ಗೇರಲು ಜನ ಮುಗಿಬಿದ್ದಿದ್ದರು.
ಸೋಮವಾರ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಆ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಮೈಸೂರು ರಸ್ತೆ, ಮೆಜೆಸ್ಟಿಕ್, ಶಾಂತಿನಗರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯುತ್ತಿದ್ದ ದೃಶ್ಯ ಕಂಡುಬಂತು. ಬಸ್‌ಗಳಲ್ಲಿ ನೂಕುನುಗ್ಗಲು ಹೆಚ್ಚಾಗಿತ್ತು. ಅದರೊಂದಿಗೆ ಒಮ್ಮೆಲೇ ಜನರು ಬಸ್ ನಿಲ್ದಾಣಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಮುಖ ಬಸ್ ನಿಲ್ದಾಣದ ಸುತ್ತ ವಾಹನ ದಟ್ಟಣೆ ಹೆಚ್ಚಾಗಿ, ಇತರೆ ವಾಹನ ಸವಾರರು ಪರದಾಡುವಂತಾಗಿತ್ತು. ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗಾಗಿ ಕೆಎಸ್‌ಆರ್‌ಟಿಸಿ 170 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿತ್ತು. ತಮಿಳುನಾಡು ಮತ್ತು ಕೇರಳ ಸಾರಿಗೆ ಇಲಾಖೆಗಳು ಕೂಡ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡುವ ಮೂಲಕ ಮತದಾನಕ್ಕೆ ಹೆಚ್ಚಿನ ಮತದಾರರನ್ನು ಸೇರಿಸಲು ಪ್ರಯತ್ನಿಸಿತು. ಹೀಗಾಗಿ ಮತದಾನ ಮಾಡಲು ತೆರಳುವರು ಶನಿವಾರ ರಾತ್ರಿಯಿಂದಲೇ ತಮ್ಮ ಊರುಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ತೆರಳಿದ್ದಾರೆ.