

ಬೆಂಗಳೂರು: ತೀವ್ರ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ನಡುವೆಯೇ ಕರ್ನಾಟಕ ರಾಜ್ಯ ತಮಿಳುನಾಡಿಗೆ ಕಾವೇರಿ ಜಲಾಶಯಗಳಿಂದ ನೀರು ಬಿಡುವ ಮೂಲಕ ಉದಾರತೆ ಮೆರೆದಿದೆ ಎಂದು ಖ್ಯಾತ ಜಲ ತಜ್ಞ ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಕಾವೇರಿ ವಿಚಾರವಾಗಿ ನಿನ್ನೆ ನಡೆದ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ತಮಿಳುನಾಡಿಗೆ ನೀರು ಬಿಡುವ ಕುರಿತು ನಿರ್ಧಾರ ಕೈಗೊಂಡ ಕರ್ನಾಟಕದ ಪರ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜೇಂದ್ರ ಸಿಂಗ್ ಅವರು, ನಾನು ದೇಶದ ವಿವಿಧ ರಾಜ್ಯಗಳಲ್ಲಿ ಅಲೆದಾಡಿದ್ದೇನೆ. ನನ್ನ ಪ್ರಕಾರ ಬರಗಾಲದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಹೀಗಿದ್ದೂ ತನ್ನ ಸಂಕಷ್ಟ ನುಂಗಿಕೊಂಡು ತಮಿಳುನಾಡು ರೈತರಿಗೆ ನೀರು ಬಿಡುಗಡೆ ಮಾಡುವ ಮೂಲಕ ಕನ್ನಡಿಗರು ಉದಾರಿಗಳು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.
ಅತ್ತ ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ಇತ್ತ ಸುದ್ದಿಗೋಷ್ಠಿ ನಡೆಸಿದ ರಾಜೇಂದ್ರ ಸಿಂಗ್ ಅವರು, ರಾಜ್ಯದ ವಿವಿಧ ಜಲಾಶಯಗಳಿಗೆ ನಾನೇ ಖುದ್ಧು ಭೇಟಿ ನೀಡಿದ್ದೇನೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ಹಾಲಿ ಇರುವ ನೀರಿನ ಪ್ರಮಾಣವನ್ನು ಗಮನಿಸಿದ್ದೇನೆ. ತಮಿಳುನಾಡು ರೈತರಿಗಾಗಿ ನೀರು ಹರಿಯುತ್ತಿದೆ. ಇದು ಸಂತಸದ ವಿಚಾರವಾದರೂ, ಜಲಾಶಯದ ಹಿಂಭಾಗದಲ್ಲಿ ನೀರು ಖಾಲಿ ಆಗುತ್ತಿರುವುದನ್ನು ನೋಡಿದರೆ ದುಃಖವಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾವೇರಿ ವಿಚಾರವನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ ರಾಜೇಂದ್ರ ಸಿಂಗ್ ಅವರು, "ಕಾವೇರಿ ಸಮಸ್ಯೆ ಬಗೆಹರಿಸುವುದು ಕಷ್ಟವೇನಲ್ಲ. ಆದರೆ, ತಮಿಳುನಾಡು ಮತ್ತು ಕರ್ನಾಟಕದ ರಾಜಕಾರಣಿಗಳಿಗೆ ಕಾವೇರಿ ವಿವಾದ ಜೀವಂತ ಇರುವುದೇ ಇಷ್ಟ. ಕಾವೇರಿ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸಕ್ಕರೆ ಮತ್ತು ಭತ್ತದ ಲಾಬಿ ಕೂಡ ಇದರ ಹಿಂದಿದೆ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.
"ಕಬ್ಬು ಮತ್ತು ಭತ್ತದ ಬೆಳೆಗೆ ನೀರು ಒದಗಿಸುವುದು ಕಷ್ಟ ಎಂಬುದು ಎರಡೂ ಸರ್ಕಾರಕ್ಕೂ ಗೊತ್ತಿದೆ. ಆದರೂ, ಅದೇ ಬೆಳೆಗೆ ಎರಡೂ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿವೆ.ವಿವಾದ ಬಡಿದೆಬ್ಬಿಸಿ ನಂತರ ಅದರ ಲಾಭ ಪಡೆದುಕೊಳ್ಳಲು ರಾಜಕಾರಣಿಗಳು ಪೈಪೋಟಿ ನಡೆಸುತ್ತಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕದ ರೈತರು ಹುಟ್ಟು ಹಾಕಿರುವ ಕಾವೇರಿ ಕುಟುಂಬಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಕರ್ನಾಟಕ ಮತ್ತು ತಮಿಳುನಾಡಿಗೆ ಮಾತ್ರವಲ್ಲದೆ ಕಾವೇರಿ ನೀರು ಬಳಕೆ ಮಾಡುವ ಭಾಗದ ಎಲ್ಲರ ಪ್ರಾತಿನಿಧ್ಯ ಅದರಲ್ಲಿ ಇರಬೇಕು. ಇದೇ ವಿಚಾರವಾಗಿ ಎರಡೂ ರಾಜ್ಯದ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸೋಮವಾರ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಕಾವೇರಿ ಕುಟುಂಬವನ್ನು ವಿಸ್ತರಿಸಿ ಸಾಂವಿಧಾನಿಕ ಮಾನ್ಯತೆ ನೀಡುವುದಾದರೆ ಸಮಸ್ಯೆ ಬಗೆಹರಿಸಲು ನಾನೂ ಜೊತೆಯಲ್ಲಿದ್ದು ಸಲಹೆ ನೀಡುತ್ತೇನೆ’ ಎಂದು ರಾಜೇಂದ್ರ ಸಿಂಗ್ ಹೇಳಿದರು.
ಕಾವೇರಿ ರಾಷ್ಟ್ರದ ಸಂಪತ್ತು
ಇದೇ ವೇಳೆ ಕಾವೇರಿ ನದಿ ರಾಷ್ಟ್ರದ ಸಂಪತ್ತು ಎಂದು ಅಭಿಪ್ರಾಯಪಟ್ಟ ರಾಜೇಂದ್ರ ಸಿಂಗ್ ಅವರು, ಕಾವೇರಿ ಯಾವುದೋ ಒಂದೆರಡು ರಾಜ್ಯದ ಸ್ವತ್ತಲ್ಲ. ಅದು ರಾಷ್ಟ್ರೀಯ ಸಂಪತ್ತು. ರಾಜ್ಯಗಳ ನಡುವಿನ ಗಡಿ ರೇಖೆಗಳು ಆಡಳಿತಾತ್ಮಕ ವಿಷಯಗಳಿಗೆ ಸೀಮಿತ ಆಗಬೇಕು. ಕಾವೇರಿ ವಿಷಯ ಬಂದಾಗ ನೀರು ಬಳಕೆ ಮಾಡುವ ಎಲ್ಲರೂ ಒಂದೇ ಎಂದು ಪರಿಗಣಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.