

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆ ಮಾಲಕಿಗೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನಾಭರಣ ಕಸಿದು ಕಾರು ಚಾಲಕ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಪಿ ನಗರದ ಎಲ್‌ಅಂಡ್ ಟಿ ಸೌತ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಸುನಂದಾ ಎಂಬುವರ ಕಾರು ಚಾಲಕ ನಾಗೇಶ್ ಈ ದುಷ್ಕೃತ್ಯವೆಸಗಿ ನಂತರ ಕಾರಿನೊಡನೆ ಪರಾರಿಯಾಗಿದ್ದಾನೆ.
ಸುನಂದಾ ಅವರನ್ನು ಕಾರಿನಲ್ಲಿ ಡ್ರಾಪ್ ಮಾಡಿದ ಬಳಿಕ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ ಚಾಲಕ ಸುನಂದಾಗೆ ಚಾಕುವಿನಿಂದ ಇರಿದು ಚಿನ್ನಾಭರಣವನ್ನು ಕಸಿದುಕೊಂಡು ಹೋಗಿದ್ದಾನೆ. ಕಳೆದ ಆರು ತಿಂಗಳಿಂದ ನಾಗೇಶ್ ಸುನಂದಾ ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಸುನಂದಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಅಲ್ಲಿ ನೆರೆದಿದ್ದ ಜನರು ಆಸ್ಪತ್ರೆಗೆ ಸೇರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸುನಂದಾ ಅವರು ಅಪಾಯದಿಂದ ಪಾರಾಗಿದ್ದು ಆರೋಪಿ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.