

ಬೆಂಗಳೂರು: ಕಾವೇರಿ ವಿವಾದ ಸಂಬಂಧ ನಗರದಲ್ಲಿ ಭುಗಿಲೆದ್ದ ಹಿಂಸಾಚಾರ ಸಂಬಂಧ ವಿವಿಧ ಪ್ರದೇಶದಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಬುಧವಾರ ಬೆಳಗ್ಗೆ ಹಿಂದಕ್ಕೆ ಪಡೆಯಲಾಗಿದೆ.
ನಗರದ ಮೈಸೂರು ರಸ್ತೆ, ಹೆಗ್ಗೇನಹಳ್ಳಿ, ನಾಯಂಡಹಳ್ಳಿ, ರಾಜಾಜಿನಗರ, ವಿಜಯನಗರ ಸೇರಿದಂತೆ ಒಟ್ಟು 16 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾವೇರಿ ವಿವಾದ ಸಂಬಂಧ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಈ ಪ್ರದೇಶಗಳಲ್ಲಿ ನಿಷೇಝಧಾಜ್ಞೆ ಜಾರಿ ಮಾಡಿ ಕರ್ಫ್ಯೂ ಹೇರಲಾಗಿತ್ತು. ವ್ಯಾಪಕ ಹಿಂಸಾಚಾರದ ಬಳಿಕ ಬುಧವಾರ ಸಂಜೆ ವೇಳೆಗೆ ಈ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಅವರು, ಇಂದು ಬೆಳಗ್ಗೆ ಕರ್ಫ್ಯೂವನ್ನು ಹಿಂದಕ್ಕೆ ಪಡೆದಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕರ್ಫ್ಯೂ ಹಿಂತೆಗೆದರೂ ಕೂಡ ಮುಂಜಾಗ್ರತಾ ಕ್ರಮವಾಗಿ ಈ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಇದೀಗ ಕರ್ಫೂ ಹೇರಲಾಗಿದ್ದ ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಕೆಪಿ ಅಗ್ರಹಾರ, ಚಂದ್ರಾ ಲೇಔಟ್, ಯಶವಂತ ಪುರ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಆರ್ ಎಂಸಿ ಯಾರ್ಡ್, ರಾಜ್ ಗೋಪಾಲ್ ನಗರ, ರಾಜಾಜಿನಗರ, ನಂದಿನಿ ಲೇಔಟ್, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ.