

ಮೈಸೂರು: ಮುಂಗಾರು ಮಳೆ ಅಭಾವದಿಂದ ಬಳಲುತ್ತಿದ್ದ ರಾಜ್ಯಕ್ಕೆ ಕಾವೇರಿ ನದಿ ನೀರಿನ ವಿವಾದ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದು, ಸುಪ್ರೀಂ ಆದೇಶವನ್ನು ಪಾಲಿಸುತ್ತಿರುವ ರಾಜ್ಯ ಸರ್ಕಾರ ನಡೆ ಇದೀಗ ರೈತರಿಗೆ ತಲೆ ಬಿಸಿಯಾಗುವಂತೆ ಮಾಡಿದೆ.
ಕೃಷಿ ಕ್ಷೇತ್ರಕ್ಕೆ ಈ ಹಿಂದೆ ರಾಜ್ಯ ಸರ್ಕಾರ ನೀರು ಬಿಡುವುದಾಗಿ ಹೇಳಿತ್ತು. ಇದನ್ನೇ ನಂಬಿ ಹಲವು ರೈತಲು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಭತ್ತ ಮತ್ತು ಕಬ್ಬು ಬೆಳೆಯಲು ಆರಂಭಿಸಿದ್ದರು. ಆದರೆ, ಸರ್ಕಾರ ಇದ್ದಕ್ಕಿದ್ದಂತೆ ತನ್ನ ನಿರ್ಧಾರದಿಂದ ಹಿಂದೆ ಸರಿದು ರಾಜ್ಯ ರಾಜಧಾನಿಗೆ ಕುಡಿಯುವ ನೀರಿನ ಅಗತ್ಯವಿದ್ದು, ಕೃಷಿ ಕ್ಷೇತ್ರಕ್ಕೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಇದರ ಬೆನ್ನಲ್ಲೇ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ನೆರೆ ರಾಜ್ಯ ತಮಿಳುನಾಡು ಮತ್ತೆ ಖ್ಯಾತೆ ತೆಗೆಯಲು ಆರಂಭಿಸಿತ್ತು. ರಾಜ್ಯದೊಂದಿಗೆ ಮಾತುಕತೆ ನಡೆಸದೆಯೇ ವಿವಾದವನ್ನು ಹೊತ್ತು ನೇರವಾಗಿ ಸುಪ್ರೀಂ ಮೆಟ್ಟಿಲೇರಿತ್ತು. ಇದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೂಡ ಎರಡು ಬಾರಿ ರಾಜ್ಯದ ವಿರುದ್ಧವೇ ಆದೇಶವನ್ನು ಹೊರಡಿಸಿತ್ತು.
ಈ ಎಲ್ಲಾ ಬೆಳವಣಿಗೆಗಳು ಇದೀಗ ರೈತರ ಮೇಲೆ ಪರಿಣಾಮ ಬೀರುತ್ತಿದ್ದು, ಕಾವೇರಿ ನೀರನ್ನೇ ಅವಲಂಬಿಸಿ ಬೆಳೆ ಬೆಳೆಯುತ್ತಿದ್ದ ರೈತರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ.
ಶ್ರೀರಂಗಪಟ್ಟಣದ ಕುಡಲಕುಪ್ಪೆ ಮೂಲದ ಕೆ.ಜಿ. ಜಯರಾಮೇ ಗೌಡ (49) ಎಂಬ ರೈತ ಕೃಷ್ಣರಾಜ ಸಾಗರ ಜಲಾಶಯದ 25 ಕಿಮೀ ದೂರದಲ್ಲಿ 2.5 ಎಕರೆ ಭೂಮಿಯನ್ನು ಹೊಂದಿದ್ದಾರೆ. ಸರ್ಕಾರದ ನೀರಿದ್ದ ನೀರು ಬಿಡುಗಡೆ ಭರವಸೆಯನ್ನು ನಂಬಿ ಬ್ಯಾಂಕ್ ನಿಂದ ಸಾಲ ಮಾಡಿ ಭತ್ತವನ್ನು ಬೆಳೆದಿದ್ದಾರೆ. ರು.11 ಸಾವಿರ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಇದೀಗ ಕೇವಲ ರು.800 ರನ್ನು ಸಂಪಾದನೆಮಾಡಿದ್ದಾರೆ.
ಈ ಹಿಂದೆಯೂ ನೀರಿನ ಸಮಸ್ಯೆಯುಂಟಾದ ಪರಿಣಾಮ ತೀವ್ರ ನಷ್ಟವನ್ನು ಅನುಭವಿಸಿದ್ದರು. ಇದೀಗ ಮತ್ತೆ ನಷ್ಟ ಎದುರಾಗಿದ್ದು, ರೈತನ ಸಂಕಷ್ಟವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಜಯರಾಮೇ ಗೌಡ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಮೂವರು ಮೊಮ್ಮಕ್ಕಳಿದ್ದಾರೆ. ತಮ್ಮ ಮೂರನೇ ಮಗಳು ರೂಪಾ ಎಂಬ ಯುವತಿಗೆ ಮದುವೆ ಮಾಡುವ ಸಲುವಾಗಿ ಈಗಾಗಲೇ ಬ್ಯಾಂಕ್ ನಲ್ಲಿ ರು. 5 ಲಕ್ಷ ಸಾಲವನ್ನು ಹೊಂದಿರುವ ಜಯರಾಮ್ ಅವರು ಇದೀಗ ಬ್ಯಾಂಕ್ ಸಾಲವನ್ನು ತೀರಲು ಸಾಧ್ಯವಾಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಸಾಲ ಹಾಗೂ ಜೀವನ ನಡೆಸುವ ಸಲುವಾಗಿ ಜಯರಾಮ್ ಅವರು ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದು, ರು.200 ಹಣವನ್ನು ಸಂಪಾದಿಸುತ್ತಿದ್ದಾರೆ. ಬ್ಯಾಂಕ್ ಗಳಿಗೆ ಬಡ್ಡಿ ನೀಡುವ ಸಲುವಾಗಿ ಮನೆಯಲ್ಲಿದ್ದ 150 ಗ್ರಾಂ ಚಿನ್ನವನ್ನು ರು.2 ಲಕ್ಷಕ್ಕೆ ಅಡವಿಟ್ಟಿದ್ದೆ. ಇದೂ ಸಾಲದೆ ದೊಡ್ಡ ಮಗಳ ಮಂಗಳ ಸೂತ್ರವನ್ನು ಅಡವಿಟ್ಟಿದ್ದೇನೆಂದು ಜಯರಾಮೇ ಗೌಡ ಅವರು ಹೇಳಿದ್ದಾರೆ.
ಬ್ಯಾಂಕ್ ಗಳಿಗೆ ಬಡ್ಡಿ ನೀಡಲು ಸಾಧ್ಯವಾಗುತ್ತಿಲ್ಲ. ಇದೀಗ ನನಗಿರುವುದು ಒಂದೇ ದಾರಿ ಗ್ರಾಮವನ್ನು ಬಿಡಬೇಕು. ಇಲ್ಲವೇ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಮಾರಬೇಕು. ಒಂದು ವೇಳೆ ಸರ್ಕಾರ ನೀರು ಬಿಡುಗಡೆ ಮಾಡಿದ್ದೇ ಆದರೆ, 3 ವರ್ಷಗಳಲ್ಲಿ ನಾನು ನನ್ನ ಸಾಲವನ್ನು ತೀರಿಸಿಕೊಳ್ಳುತ್ತೇನೆ.
ಮಗಳು ಸ್ಥಳೀಯ ಅಂಗವಾಡಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಳು. ಆದರೆ, ಆಕೆಗೆ ಆ ಅದೃಷ್ಟ ಕೂಡ ಒಲಿದುಬರಲಿಲ್ಲ. ಬಿಪಿಇಡಿಯಲ್ಲಿ ನಾನು ಉತ್ತಮ ಅಂಕವನ್ನು ಪಡೆದಿದ್ದೇನೆ. ಆದರೆ, ಕಳೆದ 6 ವರ್ಷಗಳಿಂದ ಸರ್ಕಾರ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶಗಳು ಸಿಗುತ್ತಿಲ್ಲ ಎಂದು ಜಯರಾಮ್ ಅವರ ಮಗಳು ರೂಪಾ ಹೇಳಿಕೊಂಡಿದ್ದಾರೆ. ಜಯರಾಮೇಗೌಡರಂತೆಯೇ ಸಾಕಷ್ಟು ರೈತರು ಸರ್ಕಾರ ನೀಡಿದ್ದ ಭರವಸೆಯನ್ನು ನಂಬಿ ಇದೀಗ ಸಂಕಷ್ಟದಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ.