

ಮಂಡ್ಯ: ಕಾವೇರಿ ವಿವಾದ ಸಂಬಂಧ ಸೋಮವಾರ ದೆಹಲಿಯಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಂಡ್ಯ ಜಿಲ್ಲೆಯಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಂಡ್ಯದ ವಿವಿಧ ಪ್ರದೇಶಗಳಲ್ಲಿ 15 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ತುರ್ತು ಪ್ರಹಾರ ದಳ, ಅಶ್ರುವಾಯು ದಳ ಹಾಗೂ ಗೃಹ ರಕ್ಷಕ ದಳಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಮಂಡ್ಯದ ಪಾಂಡವಪುರ, ನಾಗಮಂಗಲ, ಮಳ್ಳವಳ್ಳಿ ಸೇರಿದಂತೆ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಬೆಳಗ್ಗಿನಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಅಂತೆಯೇ ಕೆಆರ್ ಎಸ್ ಸೇರಿದಂತೆ ಪ್ರಮುಖ ಜಲಾಶಯಗಳಿಗೆ ಒದಗಿಸಲಾಗಿರುವ ಭದ್ರತೆಯನ್ನೂ ಕೂಡ ಹೆಚ್ಚಿಸಲಾಗಿದ್ದು, ಜಲಾಶಯಗಳ ಪ್ರವಾಸಿಗರ ಭೇಟಿ ರದ್ದು ಮಾಡಿ, ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇನ್ನು ಕಾವೇರಿ ಮೇಲುಸ್ತುವಾರಿ ಸಭೆ ಹಿನ್ನಲೆಯಲ್ಲಿ ನಿನ್ನೆಯೇ ಮಂಡ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು, ಮಂಡ್ಯದ ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಮಳ್ಳವಳ್ಳಿ ಹಾಗೂ ಕೆಆರ್ ಪೇಟೆಯ ವ್ಯಾಪ್ತಿಯಲ್ಲಿರುವ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ.