

ಬೆಂಗಳೂರು: ಕಳೆದ ಮೂರು ದಿನಗಳಿಂದ ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಠಿಕಾಣಿ ಹೂಡಿ ದಾಖಲೆಗಳ ಶೋಧ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ರಕ್ಷಣೆ ನೀಡಿ ಎಂದು ಐಟಿ ಡಿಜಿ ಬಾಲಕೃಷ್ಣನ್ ಅವರು ಹೇಳಿದ್ದಾರೆ.
ನಗರದ ಸದಾಶಿವನಗರ ಹಾಗೂ ಕೆಂಗೇರಿಯಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಡಿಕೆಶಿ ಅಭಿಮಾನಿಗಳು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ನಿವಾಸದ ಎದುರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆದಾಯ ತೆರಿಗೆ ಇಲಾಖೆ ಡಿಜಿ ಬಾಲಕೃಷ್ಣನ್ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರಿಗೆ ಇಂದು ಕರೆ ಮಾಡಿರುವ ಐಟಿ ಡಿಜಿ ಬಾಲಕೃಷ್ಣನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಫೋನ್ ಮೂಲಕ ಕರೆ ಮಾಡಿರುವ ಬಾಲಕೃಷ್ಣನ್ ಅವರು, ದಾಳಿ ವೇಳೆ ತಾವೇಕೆ ಸಿಆರ್ ಪಿಎಫ್ ಸಿಬ್ಬಂದಿಗಳನ್ನು ಬಳಸಿಕೊಂಡಿದ್ದೇವೆ ಎಂಬುದನ್ನು ವಿವರಿಸಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ಮೇಲೆ ದಾಳಿ ಮಾಡಿದ್ದಾಗ ಅಲ್ಲಿ ಅಧಿಕಾರಿಗಳ ಕಾರುಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಿಆರ್ ಪಿಎಫ್ ಯೋಧರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಮನೆಯೊಳಗೆ ಸಿಆರ್ ಪಿಎಫ್ ಸಿಬ್ಬಂದಿ ರಕ್ಷಣೆ ಇದೆಯಾದರೂ, ಹೊರಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ಹೀಗಾಗಿ ಮನೆಯ ಹೊರಗೂ ರಕ್ಷಣೆ ಕಲ್ಪಿಸಿ ಎಂದು ಬಾಲಕೃಷ್ಣನ್ ರಾಜ್ಯ ಮುಖ್ಯ ಕಾರ್ಯದರ್ಶಿ ಕುಂಟಿಯಾ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.