

ಬೆಂಗಳೂರು: ಸತತ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ಠಿಕಾಣಿ ಹೂಡಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ ಆದಾಯ ತೆರಿಗೆ ಅಧಿಕಾರಿಗಳು ಕೊನೆಗೂ ತಮ್ಮ ಮ್ಯಾರಥಾನ್ ದಾಖಲೆ ಪರಿಶೀಲನೆ ಪೂರ್ಣಗೊಳಿಸಿದ್ದಾರೆ.
ಮೂರು ಹಗಲು-ಮೂರು ರಾತ್ರಿ ಸತತವಾಗಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಇಂದು ಅಂತಿಮವಾಗಿ ದಾಖಲೆ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದು, ಇಂದು ಬೆಳಗ್ಗೆ ಡಿಕೆ ಶಿವಕುಮಾರ್ ಅವರ ನಿವಾಸದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು 3 ಇನ್ನೋವಾ ಕಾರುಗಳಲ್ಲಿ ಅಧಿಕಾರಿಗಳು ತೆರಳಿದ್ದು, ತೆರಳುವ ವೇಳೆ ಡಿಕೆ ಶಿವಕುಮಾರ್ ನಿವಾಸದಿಂದ ಸಾಕಷ್ಟು ಪ್ರಮುಖ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ತಾವು ವಶಪಡಿಸಿಕೊಂಡಿರುವ ದಾಖಲೆ ಪತ್ರಗಳ ಪಂಚನಾಮೆ ಕಾರ್ಯ ಮುಕ್ತಾಯದ ಬಳಿಕ ಅವುಗಳ ಪ್ರತಿಗಳನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಿ ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿ ಸೇರಿದಂತೆ ಒಟ್ಟು ಆರು ಪ್ರದೇಶಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಪೈಕಿ ಸದಾಶಿವ ನಗರದ ನಿವಾಸ ಹಾಗೂ ಕೆಂಗೇರಿ ನಿವಾಸಗಳಲ್ಲಿನ ದಾಖಲೆ ಪರಿಶೀಲನೆ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ದೆಹಲಿಯ ಸಫ್ಜರ್ ಜಂಗ್ ಆಪಾರ್ಟ್ ಮೆಂಟ್ ಹಾಗೂ ಡಿಕೆಶಿ ಕಚೇರಿಯಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಗದುಹಣ ಕಂಡುಬಂದಿತ್ತು.