ಬೆಂಗಳೂರು: ಮೋಜಿಗೆಂದು ಹೊಗೆನಕಲ್ ಪ್ರವಾಸಕ್ಕೆ ಬಂದಿದ್ದ 8 ಮಂದಿ ಬೆಂಗಳೂರು ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಮೋಜು ಮಸ್ತಿಗಾಗಿ ಕನಕಪುರದ ಕೆಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಿಪ್ಲೋಮಾ ವಿದ್ಯಾರ್ಥಿಗಳು ಬಾಡಿಗೆ ಕಾರಿನಲ್ಲಿ ಹೊಗೆನಕಲ್ ಗೆ ಆಗಮಿಸಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ.
ಮೃತರನ್ನು ಕನಕಪುರದ ಸಾತನೂರಿನ ಬಾಲಾಜಿ, ಮಾಗಡಿ ರಸ್ತೆಯ ತಾವರೆಕೆರೆಯ ಸಂತೋಷ್, ಬೆಂಗಳೂರಿನ ಉತ್ತರಹಳ್ಳಿಯ ಯಶಸ್ ಎಂದು ಗುರುತಿಸಲಾಗಿದೆ. ಇನ್ನು ಈ ಮೂವರಿಗೆ ಈಜು ಬರುತ್ತಿರಲಿಲ್ಲ. ಸದ್ಯ ಬಾಲಾಜಿ ಯಶಸ್ ಮೃತದೇಹ ಪತ್ತೆಯಾಗದ್ದು ಸಂತೋಷ ಮೃತದೇಹಕ್ಕಾಗಿ ಶೋಧ ಕಾರ್ಯಚರಣೆ ಮುಂದುವರೆದಿದೆ.