ಯಡ್ಯೂರಪ್ಪ ಮತ್ತು ಈಶ್ವರಪ್ಪ ನಡುವೆ ಬ್ರಿಗೇಡ್ ಜಟಾಪಟಿ; ಅಮಿತ್ ಶಾ ಸಂಧಾನ ಯಶಸ್ವಿ

ಯಡ್ಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬ್ರಿಗೇಡ್ ಜಟಾಪಟಿ ಬಗೆಹರಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಅಮಿತ್ ಶಾ
ಅಮಿತ್ ಶಾ
Updated on: 
ಬೆಂಗಳೂರು: ಯಡ್ಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬ್ರಿಗೇಡ್ ಜಟಾಪಟಿ ಬಗೆಹರಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆಸಿದ ಸಂಧಾನ ಯಶಸ್ವಿಯಾಗಿದೆ. 
ಜ.27 ರಂದು ರಾತ್ರಿ ನಡೆದ ಸಭೆಯಲ್ಲಿ ಭಿನ್ನಾಭಿಪ್ರಾಯ ಬಗೆಹರಿಸಲು ಅಮಿತ್ ಶಾ ಯಶಸ್ವಿಯಾಗಿದ್ದಾರೆ. ಅಮಿತ್ ಶಾ ಅವರ ಕಠಿಣ ಸಂದೇಶಕ್ಕೆ ಮಣಿದಿರುವ ಕೆಎಸ್ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದ ದೂರ ಉಳಿಯಲು ಒಪ್ಪಿಗೆ ಸೂಚಿಸಿದ್ದಾರೆ. ಸಭೆಯ ಫಲಿತಾಂಶ ಯಡ್ಯೂರಪ್ಪ ಅವರಿಗೆ ಪೂರಕವಾಗಿದೆಯಾದರೂ ಈಶ್ವರಪ್ಪ ಅವರಿಗೂ ಲಾಭದಾಯಕವಾಗಿ ಪರಿಣಮಿಸಿದ್ದು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದ ದೂರ ಉಳಿಯುವುದಕ್ಕೆ ಪ್ರತಿಯಾಗಿ ಈಶ್ವರಪ್ಪ ಅವರಿಗೆ ಬಿಜೆಪಿಯ ಹಿಂದುಳಿದ ಮೋರ್ಚಾ( ಒಬಿಸಿ ಮೋರ್ಚಾ) ದ ಹೊಣೆಗಾರಿಕೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಈಶ್ವರಪ್ಪ ಒಬಿಸಿ, ದಲಿತ ಕಾರ್ಯಕ್ರಮಗಳನ್ನು ರ್ಯಾಲಿಗಳನ್ನು ಹಮ್ಮಿಕೊಳ್ಳುವ ಸ್ವಾತಂತ್ರ್ಯ ಪಡೆಯಲಿದ್ದಾರೆ. 
ಯಡಿಯೂರಪ್ಪ-ಈಶ್ವರಪ್ಪ ಅವರೊಂದಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆಸಿದ ಸಭೆ ಸತತ ಮೂರು ಗಂಟೆಗಳ ಕಾಲ ನಡೆದಿದ್ದು, ಪದಾಧಿಕಾರಿಗಳ ನೇಮಕದಲ್ಲಿ  ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಿರುವ ಆರೋಪದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಮಿತ್ ಶಾ ಈಶ್ವರಪ್ಪ ಅವರಿಗೆ ಭರವಸೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ನೇತೃತ್ವದ ಸಮಿತಿ  ಈ ಬಗೆಗಿನ ದೂರುಗಳನ್ನು ಪರಿಶೀಲಿಸಲಿದೆ, ಅಷ್ಟೇ ಅಲ್ಲದೇ ಪಕ್ಷದಲ್ಲಿ ಗುರುತಿಸಿಕೊಂಡಿರುವವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದ ದೂರ ಉಳಿಯುವುದನ್ನೂ ಗಮನಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 
ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿಯೂ ಕೆಎಸ್ ಈಶ್ವರಪ್ಪಗೆ ಅಮಿತ್ ಶಾ ಭರವಸೆ ನೀಡಿದ್ದು, 2018 ರ ವಿಧಾನಸಭಾ ಚುನಾವಣೆಗೆ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಯಡ್ಯೂರಪ್ಪ ಸಹ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com