

ಬೆಂಗಳೂರು: ಬಹು ನಿರೀಕ್ಷಿತ "ನಮ್ಮ ಮೆಟ್ರೋ" ಮೊದಲ ಹಂತದ ಮೆಟ್ರೋ ರೈಲು ಮಾರ್ಗಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿರುವಂತೆಯೇ, ಭಾರತದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಎಂಬ ಕೀರ್ತಿಗೆ ನಮ್ಮ ಮೆಟ್ರೋ ಭಾಜನವಾಗಿದೆ.
ಇದೇ ಜೂನ್ 17ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಪಿಗೆ ರಸ್ತೆ–ಯಲಚೇನಹಳ್ಳಿ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದು, ಈಗಾಗಲೇ ಅಂತಿಮ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ನಮ್ಮ ಮೆಟ್ರೋ ಕರ್ನಾಟಕಕ್ಕೆ ಮತ್ತೊಂದು ಹಿರಿಮೆಯ ಗರಿ ತಂದಿದ್ದು, ದೇಶದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಎಂಬ ಕೀರ್ತಿಗೂ ಭಾಜನವಾಗಿದೆ. ನಮ್ಮ ಮೆಟ್ರೋದ ಮೊದಲ ಹಂತ ಒಟ್ಟು 42.3 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದ್ದು, ಒಟ್ಟು 40 ನಿಲ್ದಾಣಗಳನ್ನು ಹೊಂದಿದೆ.
ಚಿತ್ರಕೃಪೆ: ಸಾಮಾನ್ಯಜ್ಞಾನ ಮತ್ತು ಉದ್ಯೋಗ ಮಾಹಿತಿ ಫೇಸ್ ಬುಕ್ ಪೇಜ್
ಉತ್ತರ-ದಕ್ಷಿಣ ಕಾರಿಡಾರ್ 24.2 ಕಿ.ಮೀ ವ್ಯಾಪ್ತಿ ಹೊಂದಿದ್ದು, ನಾಗಸಂದ್ರದಿಂದ ಯಲಚೇನ ಹಳ್ಳಿಯವರೆಗೆ ಮೆಟ್ರೋ ರೈಲು ಸಂಚರಿಸಲಿದೆ. ಅಂತೆಯೇ ಈಗಾಗಲೇ ಕಾರ್ಯಾರಂಭ ಮಾಡಿರುವ ಪೂರ್ವ-ಪಶ್ಚಿಮ ಕಾರಿಡಾರ್ ನ 18.10 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ರೈಲು ಮೈಸೂರು ರಸ್ತೆಯಿಂದ ಬೈಯ್ಯಪ್ಪನ ಹಳ್ಳಿಯವರೆಗೂ ಸಂಚರಿಸುತ್ತಿದೆ. ಈ ಪೈಕಿ 8.8 ಕಿ.ಮೀ ದೂರದ ಸುರಂಗ ಮಾರ್ಗ ಕೂಡ ಸೇರಿದೆ. ಇನ್ನು ಇದೇ ಜೂನ್ 17ರಂದು ಉದ್ಘಾಟನೆಯಾಗಲಿರುವ ಉತ್ತರ ದಕ್ಷಿಣ ಕಾರಿಡಾರ್ ನ ಮೆಟ್ರೋ ಮಾರ್ಗ ನಾಗಸಂದ್ರದಿಂದ ಯಲಚೇನ ಹಳ್ಳಿಗೆ ಸಂಪರ್ಕ ಕಲ್ಪಿಸಲಿದ್ದು, ಒಟ್ಟು 23 ನಿಲ್ದಾಣಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಮೊದಲ ಹಂತದ ನಿರ್ಮಾಣಕ್ಕೆ ಈ ವರೆಗೂ ಒಟ್ಟು 14, 291 ಕೋಟಿ ರು.ಗಳು ವೆಚ್ಚವಾಗಿದೆ.