ಮೈಸೂರು: 19 ವರ್ಷದ ಯುವತಿಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೋಷಕರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಸೋಮವಾರ ಬಂಧನಕ್ಕೊಳಪಡಿಸಲಾಗಿದೆ.
ಯುವತಿಯ ತಂದೆ ಗುರು ಸಿದ್ದೇಗೌಡ, ತಾಯಿ ಮಹದೇವಮ್ಮ ಮತ್ತು ಸಂಬಂಧಿಕರಾದ ಕಿರಣ್, ಮಹೇಶ್, ರಮೇಶ್ ಎಂಬುವವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ನಂಜನಗೂಡು ತಾಲೂಕಿನ ಪಾರ್ವತಿಪುರದ ಶೋಭಾ (19) ಎಂಬ ಯುವತಿ 3 ತಿಂಗಳಿನಿಂದಲೂ ನಾಪತ್ತೆಯಾಗಿದ್ದಳು. ಕೃಷ್ಣ ಎಂಬ ಯುವಕನನ್ನು ಪ್ರೀತಿಸುತ್ತಿದ್ದ ಶೋಭಾ ಪೋಷಕರಿಗೆ ತಿಳಿಯದಂತೆ ಮನೆಬಿಟ್ಟು ಹೋಗಿ ಪ್ರಿಯಕರನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಳು. ಈ ಕುರಿತ ಮಾಹಿತಿ ತಿಳಿದ ಪೋಷಕರು ಶೋಭಾ ಮೇಲೆ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಮೂರು ತಿಂಗಳಿನಿಂದ ಶೋಭಾ ಕಾಣಿಸುತ್ತಿರಲಿಲ್ಲ. ಆಕೆಯ ಷೋಷಕರೇ ಹತ್ಯೆ ಮಾಡಿದ್ದಾರೆಂದು ಪ್ರಿಯಕರ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದ.
ಶೋಭಾ ನಾಪತ್ತೆಯಾದ ದಿನದಿಂದಲೂ ಪೋಷಕರು ನಾಪತ್ತೆಯಾಗಿದ್ದರು. ಇದೀಗ ಯುವತಿಯ ಪೋಷಕರು ಸೇರಿ ಒಟ್ಟು ಐವರು ಆರೋಪಿಗಳನ್ನು ಊಟಿಯಲ್ಲಿ ಬಂಧಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.