ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ದ ಮೇಲೆ ಇನ್ನೂ ನಂಬಿಕೆ ಇದೆ ಎಂದು ಅವರ ಸಹೋದರಿ ಕವಿತಾ ಲಂಕೇಶ್ ಅವರು ಗುರುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕವಿತಾ ಲಂಕೇಶ್ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿಯ ತನಿಖಾ ಪ್ರಗತಿಯನ್ನು ಆಧರಿಸಿ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಶೀಘ್ರದಲ್ಲೇ ಗೌರಿ ಹಂತಕರನ್ನು ಎಸ್ಐಟಿ ಬಂಧಿಸುವ ವಿಶ್ವಾಸವಿದೆ. ತನಿಖಾಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ ಎಂದು ಕವಿತಾ ಲಂಕೇಶ್ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಗೌರಿ ಸಹೋದರ ಇಂದ್ರಜೀತ್ ಲಂಕೇಶ್ ಅವರು, ಗೌರಿ ಲಂಕೇಶ್ ಹಂತಕರನ್ನು ಬಂಧಿಸಿದರೆ, ಎಂ.ಎಂ.ಕಲಬುರ್ಗಿ, ಗೋವಿಂದ್ ಪನ್ಸಾರೆ ಹಾಗೂ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣಗಳನ್ನು ಬೇಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಗೌರಿ ಲಂಕೇಶ್ ಹಂತಕರ ಬಗ್ಗೆ ಖಚಿತ ಸುಳಿವು ಸಿಕ್ಕಿದೆ ಎಂದು ಹೇಳಿದ್ದರು.