ಶುಕ್ರವಾರದ ಮಹಾಮಳೆಗೆ ಬೆಚ್ಚಿಬಿದ್ದ ಬೆಂಗಳೂರು: ತಾಯಿ, ಮಗಳು ಸೇರಿದಂತೆ ಮೂವರು ನೀರುಪಾಲು

ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಸುರಿದ ಸಿಡಿಲು ಸಹಿತ ಅಬ್ಬರದ ಮಳೆಯಲ್ಲಿ ಮತ್ತೆ ಮೂವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಕುರುಬರಹಳ್ಳಿಯ ಸಮೀಪದ ರಾಜಕಾಲುವೆಯಲ್ಲಿ ..
ಶುಕ್ರವಾರ ಸುರಿದ ಭಾರೀ ಮಳೆ
ಶುಕ್ರವಾರ ಸುರಿದ ಭಾರೀ ಮಳೆ
Updated on: 
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಸುರಿದ ಸಿಡಿಲು ಸಹಿತ ಅಬ್ಬರದ ಮಳೆಯಲ್ಲಿ ಮತ್ತೆ ಮೂವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ.
ಕಳೆದ 10 ದಿನಗಳಿಂದ ಭಾರಿ ಮಳೆಗೆ ಬೆಂಗಳೂರು ಮಹಾನಗರ ತತ್ತರಿಸಿದೆ. ಹಲವು ತಗ್ಗು ಪ್ರದೇಶಗಳಿಗೆ ನೀರು ನುದ್ದಿ ಎಲ್ಲೆಡೆಯೂ ರಸ್ತೆಗಳು ಗುಂಡಿಗಳಾಗಿವೆ, ಮಳೆಯ ಕಾರಣದಿಂದ ಉಂಟಾದ ರಸ್ತೆ ಗುಂಡಿಗಳಿಂದ ನಗರದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ.
ಕುರುಬರಹಳ್ಳಿಯ ಸಮೀಪದ ರಾಜಕಾಲುವೆಯಲ್ಲಿ ನಿಂಗಮ್ಮ (57) ಹಾಗೂ ಅವರ ಮಗಳು ಪುಷ್ಪಾ (22) ಕೊಚ್ಚಿಹೋಗಿದ್ದಾರೆ. 
ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ಹೊರ ಬಂದರು, ಅದೇ ಸಮಯದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ನೋಡನೋಡುತ್ತಿದ್ದಂತೆ ನಿಂಗಮ್ಮ ಹಾಗೂ ಪುಷ್ಪಾ ನೀರಿನಲ್ಲಿ ಮುಳುಗಿದರು. ಕ್ಷಣಾರ್ಧದಲ್ಲಿ ಅವರು ಕಾಣೆಯಾದರು ಎಂದು ಸ್ಥಳೀಯ ನಿವಾಸಿ ರಘು ಎಂಬುವರು ಹೇಳಿದ್ದಾರೆ. ತಮ್ಮ ಹೆಗಲ ಮೇಲೆ ಮೊಮ್ಮಗ ಅಭಿಷೇಕ್ ನನ್ನು ಶಿವರುದ್ರಪ್ಪ ರಕ್ಷಿಸಿ ಕರೆ ತಂದರು ಎಂದು ರಘು ವಿವರಿಸಿದ್ದಾರೆ.
ಬಸವೇಶ್ವರ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ  ವಾಸುದೇವ ಭಟ್‌ ಮಳೆ ನೀರುಗಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಸಂಜೆ ಆರು ಗಂಟೆ ವೇಳೆಯಲ್ಲಿ ಅವರು ಪಾದಾಚಾರಿ ಮಾರ್ಗದ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಪಕ್ಕದ ರಸ್ತೆ ಮೇಲೆ ಐದು ಅಡಿಯಷ್ಟು ನೀರು ಹರಿಯುತ್ತಿತ್ತು. ಅದರಲ್ಲಿ ನಡೆದುಕೊಂಡು ಹೋಗುವಾಗ ಮಳೆನೀರುಗಾಲುವೆಯಲ್ಲಿ ಕೊಚ್ಚಿಹೋಗಿದ್ದಾರೆ’ಎಂದು ಹೇಳಲಾಗಿದೆ. 
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದ (ಎಸ್‌ಡಿಆರ್‌ಎಫ್‌) 12 ಮಂದಿ, ಕೊಚ್ಚಿ ಹೋದವರಿಗಾಗಿ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದರು. 
ಸ್ಥಳಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಆರ್.ಸಂಪತ್‌ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ರು. 5 ಲಕ್ಷ ಪರಿಹಾರವನ್ನು ಮೇಯರ್ ಆರ್.ಸಂಪತ್‌ರಾಜ್ ಘೋಷಿಸಿದ್ದಾರೆ.
ಕಾಲುವೆಯ ಮುರಿದ ಸಿಮೆಂಟ್ ಸ್ಲ್ಯಾಬ್‌ಗಳನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅವಘಡಕ್ಕೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ’ ಎಂದು ಸ್ಥಳಕ್ಕೆ ಬಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಕಳೆದ 12 ವರ್ಷಗಳಲ್ಲಿ ನಾನು ಇಂಥ ಮಳೆಯನ್ನು ನೋಡಿರಲಿಲ್ಲ, ಎಲ್ಲಾ ರಸ್ತೆಗಳು ತುಂಬಿ ಮನೆಗೆ ನೀರು ನುಗ್ಗುತ್ತಿದೆ. ನನ್ನ ಮನೆಗೂ ಕೂಡ ಪ್ರವಾಹದಂತೆ ನೀರು ಹರಿದು ಬರುತ್ತಿದೆ ಎಂದು ಮಲ್ಲೇಶ್ವರಂ ನಿವಾಸಿ ಶ್ರೀ ಎಂಬುವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com