ಬೆಂಗಳೂರು: ಕಳೆದ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಮೃತದೇಹ ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಶವಪರೀಕ್ಷೆ ವಿಧಿ ವಿಧಾನ ಪ್ರಗತಿಯಲ್ಲಿದೆ. ಹಲವು ಗಣ್ಯರು, ಚಿಂತಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
ಸಿಬಿಐ ತನಿಖೆಗೆ ಒತ್ತಾಯ: ವಿಕ್ಟೋರಿಯಾ ಆಸ್ಪತ್ರೆಗೆ ಇಂದು ಭೇಟಿ ನೀಡಿರುವ ಗೌರಿ ಲಂಕೇಶ್ ಸಹೋದರ, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಮ್ಮ ಸಹೋದರಿಯ ಅಂತ್ಯ ಈ ರೀತಿಯಾಗಿರುವುದು ಅತೀವ ದುಃಖವನ್ನುಂಟುಮಾಡಿದೆ. ಇಂತಹ ಹೇಯ ಕೃತ್ಯವೆಸಗಿದವರನ್ನು ಶೀಘ್ರವೇ ಪತ್ತೆಹಚ್ಚಿ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆಸ್ಪತ್ರೆಗೆ ಬಹುಭಾಷಾ ನಟ ಪ್ರಕಾಶ್ ರೈ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.
ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ತಮ್ಮ ಸೋದರಿಯು ನಿರ್ಭೀತ, ದಿಟ್ಟ ಪತ್ರಕರ್ತೆಯಾಗಿದ್ದು, ತಮ್ಮ ಜೀವಕ್ಕೆ ಬೆದರಿಕೆಯಿರುವ ಬಗ್ಗೆ ಯಾವತ್ತೂ ಹೇಳಿಕೊಂಡಿರಲಿಲ್ಲ ಎಂದು ಇಂದ್ರಜಿತ್ ಹೇಳಿದ್ದಾರೆ. ಹತ್ಯೆ ಮಾಡಿದ ಆರೋಪಿಗಳು ಸದ್ಯದಲ್ಲಿಯೇ ಸಿಕ್ಕಿಹಾಕಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಗೌರಿ ಲಂಕೇಶ್ ಅವರ ಇಚ್ಛೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.