ಇವಿಎಂ ಕಾರ್ಯಾಗಾರ: ಓರ್ವ ಅಧಿಕಾರಿಗೆ ಎರಡೆರಡು ಕಡೆ ತರಬೇತಿ, ಗೊಂದಲದಲ್ಲಿ ಅಧಿಕಾರಿಗಳು
ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಇವಿಎಂ (ಮತಯಂತ್ರ)ದ ಕುರಿತು ತರಬೇತಿ ನೀಡುವ ಸಲುವಾಗಿ ಚುನಾವಣಾ ಆಯೋಗ ಕಾರ್ಯಾಗಾರವನ್ನು ಏರ್ಪಡಿಸುತ್ತಿದೆ. ಆದರೆ, ಒಬ್ಬ ಅಧಿಕಾರಿಗೆ ಎರಡೆರಡು ಕಡೆ ತರಬೇತಿ ನಿಯೋಜಿಸಿರುವುದರಿಂದ ಅಧಿಕಾರಿಗಳು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ...
ಬೆಂಗಳೂರು; ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಇವಿಎಂ (ಮತಯಂತ್ರ)ದ ಕುರಿತು ತರಬೇತಿ ನೀಡುವ ಸಲುವಾಗಿ ಚುನಾವಣಾ ಆಯೋಗ ಕಾರ್ಯಾಗಾರವನ್ನು ಏರ್ಪಡಿಸುತ್ತಿದೆ. ಆದರೆ, ಒಬ್ಬ ಅಧಿಕಾರಿಗೆ ಎರಡೆರಡು ಕಡೆ ತರಬೇತಿ ನಿಯೋಜಿಸಿರುವುದರಿಂದ ಅಧಿಕಾರಿಗಳು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ.
ಬಿಡಬ್ಲ್ಯೂಎಸ್ಎಸ್'ಬಿಯ ಮೂವರು ಅಧಿಕಾರಿಗಳು ಗೊಂದಲದಲ್ಲಿ ಸಿಲುಕಿಕೊಂಡಿದ್ದು, ಒಬ್ಬ ಅಧಿಕಾರಿಯನ್ನು ಎರಡೆರಡು ಕಡೆ ತರಬೇತಿ ಕೇಂದ್ರಗಳಿಗೆ ಹೋಗುವಂತೆ ಸೂಚಿಸಿದೆ.
ಸಹಾಯಕ ಇಂಜಿನಿಯರ್ ಒಬ್ಬರಿಗೆ ಹನುಮಂತ ನಗರದ ಪಿಇಎಸ್ ಕಾಲೇಜು ಹಾಗೂ ಬಾಗಲಕುಂಟೆಯಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಸೂಚಿಸಿದೆ. ಹೀಗಾಗಿ ಅಧಿಕಾರಿಗಳಿಗೆ ಪತ್ರ ಬರೆದಿರುವಅಧಿಕಾರಿ ಪಿಇಎಸ್ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಇದರಂತೆ ಇದೇ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಸಹಾಯಕ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ತಿಳಿದುಬಂದಿದೆ.
ಚುನಾವಣೆ ಸಂದರ್ಭಗಳಲ್ಲಿ ಮತಗಟ್ಟೆ ಕೇಂದ್ರಗಳ ಬಳಿ ಸರ್ಕಾರಿ ಅಧಿಕಾರಿಗಳನ್ನು ಅಧ್ಯಕ್ಷರಾಗಿ ಹಾಗೂ ಸಹಾಯಕ ಅಧ್ಯಕ್ಷರಾಗಿ ನಿಯೋಜಿಸಲು ಆಯೋಗ ನಿರ್ಧರಿಸಿದೆ. ಇದಕ್ಕಾಗಿ ಇವಿಎಂಗಳ ನಿರ್ವಹಣೆ ಹಾಗೂ ಅವುಗಳ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲು ಆಯೋಗ ಏ.28 ರಂದು ಕಾರ್ಯಗಾರವನ್ನು ಆಯೋಜಿಸಿದೆ.