ಬೆಂಗಳೂರು: ಪ್ರವಾಹದಿಂದ ನಲುಗಿ ಹೋಗಿರುವ ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಸಂತ್ರಸ್ತರ ನೆರವಿನ ರೂ.3.28 ಕೋಟಿ ನೆರವು ನೀಡುವುದಾಗಿ ಬಿಬಿಎಂಪಿ ಶನಿವಾರ ಘೋಷಣೆ ಮಾಡಿದೆ.
ಪಾಲಿಕೆ ಕಚೇರಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮೇಯರ್ ಆರ್.ಸಂಪತ್ ರಾಜ್ ಅವರು, ಬಿಬಿಎಂಪಿ ಅನುದಾನದಿಂದ ತುರ್ತು ಪರಿಹಾರ ಕಾರ್ಯಕ್ಕೆ ತಲಾ ಒಂದೊಂದು ಕೋಟಿ ಅನುದಾನ ನೀಡಲಾಗುವುದು. 198 ಕಾರ್ಪೊರೇಟ್ ಗಳ ಒಂದು ತಿಂಗಳ ಗೌರವ ಧನ ಹಾಗೂ ಅಧಇಕಾರಿ, ಸಿಬ್ಬಂದಿಯ ಒಂದು ದಿನದ ವೇತನ ಸೇರಿ ಒಟ್ಟು ರೂ.3.28 ಕೋಟಿ ನೆರವು ನೀಡಲಾಗುವುದು ಎಂದು ಹೇಳಿದರು.
ಇದಲ್ಲದೆ, ಪಾಲಿಕೆ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಪರಿಹಾರ ಸಾಮಾಗ್ರಿಗಳ ಸಂಗ್ರಹಕ್ಕೆ ಕೇಂದ್ರ ತೆರೆಯಲಾಗಿದ್ದು, ಸಂತ್ರಸ್ತರಿಗೆ ನಗರದ ದಾನಿಗಳು ಆಹಾರ ವಸ್ತು, ಬಟ್ಟೆ, ಹಾಸಿಗೆ, ಹೊದಿಗೆ ಮತ್ತಿತರ ತುರ್ತು ಅಗತ್ಯ ಸಾಮಾಗ್ರಿಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.
ಬೆಳಿಗ್ಗೆ 9 ರಿಂದ ಸಂಜೆ 5ರವರೆಗೂ ಸಾಮಾಗ್ರಿಗಳನ್ನು ಸ್ವೀಕರಿಸಲಾಗುತ್ತದೆ. ಪಾಲಿಕೆಯ ಸದಸ್ಯರೂ ತಮ್ಮ ತಮ್ಮ ವಾರ್ಡುಗಳಲ್ಲಿ ಪರಿಹಾರ ಸಾಮಾಗ್ರಿ ಸಂಗ್ರಹಿಸಿ ಈ ಕೌಂಟರ್'ಗೆ ನೀಡಬೇಕು. ನಂತರ ಇದನ್ನು ಬಿಬಿಎಂಪಿ ಸಂತ್ರಸ್ತರಿಗೆ ರವಾನಿಸುವ ಕೆಲಸ ಮಾಡುತ್ತದೆ ಎಂದರು.
ಸಂಗ್ರಹವಾದ ಪರಿಹಾರ ಸಾಮಾಗ್ರಿಗಳನ್ನು ಪ್ರವಾಹ ಪ್ರದೇಶದ ಜನರಿಗೆ ತಲುಪಿಸುವ ಕಾರ್ಯವನ್ನು ವಿಶೇಷ ಆಯುಕ್ತರಾದ ರಂದೀಪ್ ಮತ್ತು ಮನೋಜ್ ಕುಮಾರ್ ಮೀನ ನಿರ್ವಹಿಸಲಿದ್ದಾರೆಂದು ತಿಳಿಸಿದರು.