ಕಾವೇರಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಕಾವೇರಿ ನದಿ ನ್ಯಾಯಾಧೀಕರಣವು 2007ರ ತನ್ನ ಅಂತಿಮ ಐತೀರ್ಪು ಪ್ರಕಟಿಸಿ ಶೇ.30ರ ಅವಲಂಬನಾ ಸೂತ್ರದಡಿ ಕಾವೇರಿ ನದಿ ನೀರಿನ ಒಟ್ಟು ಪ್ರಮಾಣವನ್ನು 740 ಟಿಎಂಸಿ ಎಂದು ಲೆಕ್ಕ ಹಾಕಿತ್ತು. ಬಳಿತ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳ ರಾಜ್ಯಕ್ಕೆ 30 ಟಿಎಂಸಿ, ಪಾಂಡಿಚೇರಿಗೆ 7 ಟಿಎಂಸಿ ಹಾಗೂ ಉಳಿದಂತೆ 17 ಟಿಎಂಸಿ ನೀರನ್ನು ಪರಿಸರ ಬಳಕೆ, ಆವಿಯಾಗುವಿಕೆ ಮುಂದಾದವುಗಳಿಗೆ ಹಂಚಿಕೆ ಮಾಡಿತ್ತು.
ಆದರೆ, ನ್ಯಾಯಾಧೀಕಱಣದ ಅಂತಿಮ ತೀರ್ಪಿನಲ್ಲಿನ ನೀರು ಹಂಚಿಕೆ ಪ್ರಮಾಣ, ನೀರು ಹಂಚಿಕೆಗೆ ಬಳಸಿದ ಮಾನದಂಡಗಳ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಅತೃಪ್ತಿ ಹೊರಹಾಕಿತ್ತು. ಅಲ್ಲದೆ, ಸುಪ್ರೀಂಕೋರ್ಟ್ ನಲ್ಲಿ ಈ ಬಗ್ಗೆ ಮೇಲ್ಮನವಿಯನ್ನೂ ಮಾಡಿಕೊಂಡಿದ್ದವು. ರಾಜ್ಯಗಳು ಮೇಲ್ಮನವಿ ಸಲ್ಲಿಸಿ 11 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದೆ.
ನ್ಯಾಯಾಧೀಕರಣ ಐತೀರ್ಪಿನಲ್ಲಿ ಕರ್ನಾಟಕಕ್ಕೆ ವಾರ್ಷಿಕ 270ಟಿಎಂಸಿ ನೀರು ಹಂಚಿತ್ತು. ಇದು ಸಾಲದು, 465 ಟಿಎಂಸಿ ನೀರು ಬೇಕು ಎಂದು ಕರ್ನಾಟಕ ವಾದಿಸುತ್ತಲೇ ಬಂದಿದೆ. ಅದರೆ 270ಕ್ಕಿಂತಲೂ ಕಡಿಮೆ ನೀರು ಸುಪ್ರೀಂಕೋರ್ಟ್ ಹಂಚಿಕೆ ಮಾಡಿದರೆ, ಮುಂದಿನ ಗತಿಯೇನು ಎಂಬುದು ಇದೀಗ ರಾಜ್ಯಕ್ಕೆ ಎದುರಾಗಿರುವ ಆತಂಕವಾಗಿದೆ.
ಇನ್ನು ಕರ್ನಾಟಕಕ್ಕೆ ಮತ್ತೊಂದು ಆತಂಕ ಕೂಡ ಇದ್ದು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯ ಅಣೆಕಟ್ಟುಗಳ ನಿಯಂತ್ರಣ ತೆಗೆದುಕೊಳ್ಳಲಿದೆ ಎನ್ನಲಾಗಿರುವ ಕಾವೇರಿ ಜಲ ನಿರ್ವಹಣಾ ಮಂಡಳಿ ಕುರಿತು ಇಂದೇ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ. ಇದರ ಸ್ವರೂಪ, ಕಾರ್ಯವ್ಯಾಪ್ತಿ, ಅಧಿಕಾರ ಎಲ್ಲವೂ ಅಸ್ಪಷ್ಟವಾಗಿದೆ. ಆದರೆ, ಕಾವೇರಿ ನೀರಿನ ಮೇಲಿನ ಹಿಡಿದ ಮಂಡಳಿಯ ಪಾಲಾದರೆ, ಕರ್ನಾಟಕಕ್ಕೆ ಬಹುದೊಡ್ಡ ಸಂಕಷ್ಟ ಎದುರಾಗಲಿದೆ.