

ಮೈಸೂರು: ಕೊಡಗು ಜಿಲ್ಲೆಯಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಕೊಡವರು ಮೈಸೂರಿನಲ್ಲಿಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಮೈಸೂರಿಗೆ ಬಂದಿದ್ದ ಕೊಡವರು, ವಸ್ತುಪ್ರದರ್ಶನ ಕೇಂದ್ರದಿಂದ ಕೋಟೆ ಆಂಜನೇಯ ಸ್ವಾಮಿ ದೇಗುಲದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
'ಕೊಡಗನ್ನು ಉಳಿಸಿ, ಕಾವೇರಿ ಕಾಪಾಡಿ' ಎಂಬ ಘೋಷಣಾ ಘಲಕ ಪ್ರದರ್ಶಿಸಿದ ಪ್ರತಿಭಟನಾಕಾರರು ರೈಲ್ವೆ ಮಾರ್ಗ ನಿರ್ಮಾಣವನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿದರು.
ಬಳಿಕ ಇದೆ ಮಾರ್ಗದಲ್ಲಿ ಹಿಂದಿರುಗಿ ದೇವರಾಜ ಅರಸು ಕುಸ್ತಿ ಮೈದಾನದಲ್ಲಿ ಸಮಾವೇಶಗೊಂಡರು.ನಟ ಸುರೇಶ್ ಹೆಬ್ಳಿಕರ್, ಸುಪ್ರೀಂ ಕೋರ್ಟ್ ವಕೀಲ ಬ್ರಿಜೀಶ್ ಕಾಳಪ್ಪ ಸೇರಿ ಅನೇಕರು ಪಾಲ್ಗೊಂಡಿದ್ದಾರೆ.
ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಾವಿರಾರು ಮರ ಹನನ ಮಾಡಲಾಗುತ್ತದೆ. ಇದರಿಂದ ಕಾವೇರಿ ನದಿ ಮೂಲಕ್ಕೆ ಧಕ್ಕೆ ಉಂಟಾಗುತ್ತದೆ. ಕೊಡಗಿನ ಅಸ್ಮಿತೆ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.