ಹುಬ್ಬಳ್ಳಿ: ವೈದ್ಯರ ಯಡವಟ್ಟಿನಿಂದಾಗಿ ಬದುಕಿದ್ದ ವ್ಯಕ್ತಿಯನ್ನು ಸತತ 7 ಗಂಟೆಗಳ ಕಾಲ ಶವಾಗಾರದಲ್ಲಿಟ್ಟ ಆಘಾತಕಾರಿ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ಬೇಜವಾಬ್ದಾರಿ ಖಂಡಿಸಿ ಯುವಕನ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ ನೇಕಾರ ನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕಿಡಾಗಿದ್ದ ಹುಬ್ಬಳ್ಳಿ ಆನಂದ ನಗರ ನಿವಾಸಿ ಪ್ರವೀಣ್ ಮೂಳೆ(23 ವರ್ಷ) ಎಂಬ ಯುವಕನನ್ನು ರಾತ್ರಿ 8ಗಂಟೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ ಪ್ರವೀಣ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಬಳಿಕ ಆತನನ್ನು ಶವಗಾರಕ್ಕೆ ಸಾಗಿಸಲಾಗಿತ್ತು.
ಇಂದು ಬೆಳಗ್ಗೆ 10 ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಪ್ರವೀಣ್ ಬದುಕಿರುವುದು ತಿಳಿದು ಬಂದಿದೆ. ವಿಷಯ ತಿಳಿದ ಸಂಬಂಧಿಕರು ಪ್ರವೀಣ್‌ನನ್ನು ಖಾಸಗಿ ಆಸ್ಪತ್ರಗೆ ಸಾಗಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆ ವೈದ್ಯರು ಕೆಲವು ನಿಮಿಷಗಳ ಮುಂಚೆಯೇ ಪ್ರವೀಣ್ ಮೃತಪಟ್ಟಿದ್ದಾಗಿ ಹೇಳಿದ್ದಾರೆ.
ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರ ಯಡವಟ್ಟಿಗೆ ಪ್ರವೀಣ್ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.