ಪೊಲೀಸ್ ಮೂಲಗಳ ಪ್ರಕಾರ ಕಳೆದ ಡಿಸೆಂಬರ್ 31ರಂದು ಇಂದಿರಾ ನಗರದಲ್ಲಿ ತಡ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಡಾರ್ಜಲಿಂಗ್ ಮೂಲದ ಅಣ್ಣ-ತಂಗಿಯ ಮೇಲೆ ಕುಡಿದ ಮತ್ತಿನಲ್ಲಿದ್ದ ಗುಂಪೊಂದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಹೊಸ ವರ್ಷದಂದು ರಸ್ತೆ ಮಧ್ಯೆ 20ಕ್ಕೂ ಹೆಚ್ಚು ಮಂದಿ ಪಾನಮತ್ತರಾಗಿ ಕುಣಿಯುತ್ತಿದ್ದರು. ಈ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದ ಅಣ್ಣ-ತಂಗಿಯ ಮೇಲೆ ಒಮ್ಮೆಲೆ ಮುಗಿಬಿದ್ದ ಗುಂಪು ಮನಸೋಇಚ್ಛೆ ಇಬ್ಬರಿಗೂ ಥಳಿಸಿದ್ದಾರೆ. ಘಟನೆ ನಂತರ ಹೆದರಿದ ಅಣ್ಣ-ತಂಗಿ ಯಾವುದೇ ದೂರು ದಾಖಲಿಸಿರಲಿಲ್ಲ, ಆದರೆ ಈಗ ಈ ಹಲ್ಲೆಯ ವಿಡಿಯೊ ವೈರಲ್ ಆಗಿದ್ದು, ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಪೈಕಿ ಇಂದಿರಾನಗರ ವಾಸಿಗಳಾದ ಅಂಬರೀಶ್ ಮತ್ತು ಲೊಕೇಶ್ ಬಂಧಿತರಾಗಿದ್ದಾರೆ. ಉಳಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.