ಗುತ್ತಿಗೆದಾರರು-ಕಾರ್ಪೊರೇಟರ್'ಗಳ ನಡುವೆ ಅಪವಿತ್ರ ಒಪ್ಪಂದ; ಸಂಕಷ್ಟದಲ್ಲಿ ಪೌರಕಾರ್ಮಿಕರು

ಗುತ್ತಿಗೆದಾರರು-ಕಾರ್ಪೊರೇಟರ್'ಗಳ ನಡುವಿನ ಅಪವಿತ್ರ ಒಪ್ಪಂದಗಳಿಂದಾಗಿ ಸರಿಯಾಗಿ ವೇತನಗಳು ಸಿಗದೆ ಪೌರ ಕಾರ್ಮಿಕರು ಇಂದು ಸಂಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಗುತ್ತಿಗೆದಾರರು-ಕಾರ್ಪೊರೇಟರ್'ಗಳ ನಡುವಿನ ಅಪವಿತ್ರ ಒಪ್ಪಂದಗಳಿಂದಾಗಿ ಸರಿಯಾಗಿ ವೇತನಗಳು ಸಿಗದೆ ಪೌರ ಕಾರ್ಮಿಕರು ಇಂದು ಸಂಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ. 
ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರನ್ನು ನಿರ್ಲಕ್ಷ್ಯದಿಂದ ನೋಡುತ್ತಿರುವ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಸರಿಯಾಗಿ ವೇತನಗಳನ್ನು ನೀಡುತ್ತಿಲ್ಲ. ಕೆಲವರಿಗೆ ವರ್ಷಕ್ಕೆ ಒಂದು ತಿಂಗಳು ವೇತನವನ್ನು ನೀಡಿದ್ದರೆ ಇನ್ನು ಕೆಲವರಿಗೆ 2 ತಿಂಗಳು ಹಾಗೂ ಇನ್ನೂ ಕೆಲವರಿಗೆ 3 ತಿಂಗಳು ಮಾತ್ರ ವೇತನವನ್ನು ನೀಡಲಾಗಿದೆ. 
ವೇತನವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಪೌರ ಕಾರ್ಮಿಕರು ಸಾಲಗಳ ಸುಳಿಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸೂಕ್ತ ಸಮಯಕ್ಕೆ ಮನೆಗಳ ಬಾಡಿಗೆ ಕಟ್ಟದ ಕಾರಣ ಅದೆಷ್ಟೋ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಶುಲ್ಕ ಪಾವತಿಯಾಗದೆ ಶಾಲೆಯಿಂದ ಮಕ್ಕಳನ್ನು ಹೊರಹಾಕಲಾಗುತ್ತಿದೆ. ಪೌರ ಕಾರ್ಮಿಕರ ಪರಿಸ್ಥಿತಿ ಈ ರೀತಿ ಇದ್ದರೂ, ಬಿಬಿಎಂಪಿ ಮಾತ್ರ ಸಾರ್ವಜನಿಕರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ವೇತನವನ್ನು ಸರಿಯಾಗಿ ನೀಡಲಾಗುತ್ತಿದೆ ಎಂದು ಹೇಳುತ್ತಿದೆ. 
ಈ ಎಲ್ಲಾ ಪರಿಸ್ಥಿತಿಗಳ ನಡುವೆಯೂ ಕೆಲ ಧೈರ್ಯಯುತ ಕಾರ್ಮಿಕರು ಅಕ್ರಮಗಳನ್ನು ಬಹಿರಂಗ ಪಡಿಸುತ್ತಿದ್ದಾರೆ. 
2013ರಲ್ಲಿ ಉಂಟಾಗಿದ್ದ ತ್ಯಾಜ್ಯ ಸಮಸ್ಯೆಯಿಂದ ವಿಶ್ವಮಟ್ಟದಲ್ಲಿ ತ್ಯಾಜ್ಯ ನಗರಿಯಾಗಿ ಬೆಂಗಳೂರು ತಲೆ ತಗ್ಗಿಸಿತ್ತು. ಇದಕ್ಕೆ ಕಾರಣವಾಗಿದ್ದ ಅವೈಜ್ಞಾನಿಕ ಕಸ ವಿಲೇವಾರಿ ಹಾಗೂ ಗುತ್ತಿಗೆದಾರರ ಮಾಫಿಯಾ ಮಟ್ಟ ಹಾಕಲು ನಡೆಸಿದ್ದ ಪ್ರಯತ್ನಗಳೂ ವಿಫಲವಾಗಿದ್ದವು. ಈ ಹಿನ್ನಲೆಯಲ್ಲಿ 2015-16ರಲ್ಲಿ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಹಾಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು, ವೈಜ್ಞಾನಿಕ ಸಕ ವಿಲೇವಾರಿಗೆ ಪ್ರತ್ಯೇಕ ಮಾನದಂಡಗಳನ್ನು ರೂಪಿಸಿದ್ದರು. ಕಸ ಸಮಸ್ಯೆ ಹಾಗೂ ಗುತ್ತಿಗೆದಾರರ ವಂಚನೆಗೆ ಬ್ರೇಕ್ ಹಾಕಲು ಗುತ್ತಿಗೆದಾರರು ಕಡ್ಡಾಯವಾಗಿ ಷರತ್ತುಗಳನ್ನು ಪಾಲನೆ ಮಾಡಬೇಕೆಂದು ತಿಳಿಸಿದ್ದರು. 
ಬಿಬಿಎಂಪಿ ವಿಧಿಸಿರುವ ಎಲ್ಲಾ ವೈಜ್ಞಾನಿಕ ಮಾನದಂಡ ಪಾಲಿಸಿದರೆ ಕಸ ವಿಲೇವಾರಿ ಗುತ್ತಿಗೆ ದರವನ್ನು ವಾರ್ಷಿಕ 370-400 ಕೋಟಿ ರು ಗಳಿಂದ ರೂ.750 ಕೋಟಿ ಗಳಿಗೆ ಹೆಚ್ಚಳ ಮಾಡುವುದಾಗಿ ಆದೇಶಿಸಿದ್ದರು. 
4 ಬಾರಿ ಹೊಸ ಗುತ್ತಿಗೆ ಆಹ್ವಾನಿಸಿದರೂ ಯಾರೊಬ್ಬರೂ ಗುತ್ತಿಗೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಅವಧಿ ಮುಗಿದರೂ ಹಳೆಯ ಗುತ್ತಿಗೆದಾರರೇ ಗುತ್ತಿಗೆ ನಿರ್ವಹಣೆಯಲ್ಲಿ ಮುಂದುವರೆದಿದ್ದು, ಯಾವುದೇ ಹೊಸ ಷರತ್ತುಗಳನ್ನು ಪಾಲಿಸದೆ ದುಪ್ಪಟ್ಟು ಗುತ್ತಿಗೆ ಹಣ ಪಡೆಯುತ್ತಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿರುವ ಪ್ರಭಾವಿ ಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳೂ ಸಹ ಕುಮ್ಮಕ್ಕು ನೀಡುತ್ತಿದ್ದಾರೆಂದು ಹೇಳಲಾಗುತ್ತಿದೆ. 
ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಿಗೆ ಈ ವರೆಗೂ ಸರಿಯಾಗಿ ರಜೆಗಳನ್ನು ನೀಡುತ್ತಿಲ್ಲ. ವಾರಕ್ಕೊಮ್ಮೆ ಅರ್ಧ ದಿನ ರಜೆ ನೀಡುತ್ತಿದ್ದು ಅದು ರಜೆ ಎಂದು ಪರಿಗಣನೆಯಾಗುವುದಿಲ್ಲ. ಇವರಿಗೆ ರಜೆ ನೀಡುವ ಸಲುವಾಗಿ ಶೇ.16 ರಷ್ಟು ಹೆಚ್ಚುವರಿ ಗುತ್ತಿಗೆ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಜೊತೆಗೆ ಕಸ ಗುಡಿಸುವ ರಸ್ತೆಗಳ ಉದ್ದ ಕಡಿಮೆ ಮಾಡಲಾಗುವುದು. ಪ್ರತೀ ಸಾರ್ವಜನಿಕ ಸ್ಥಳಗಳಲ್ಲೂ ಗುತ್ತಿಗೆದಾರರ ವೆಚ್ಚದಿಂದಲೇ ಕಸದ ಡಬ್ಬಿ ಅಳವಡಿಕೆ ಮಾಡಬೇಕು. ಪ್ರತಿ ನಿತ್ಯ ಕಸ ಸಾಗಿಸುವ 200 ಚಾಲಕರಿಗೆ ನಿತ್ಯ ರೂ.200 ಊಟದ ಭತ್ಯೆ ನೀಡಬೇಕಿದೆ. 
ಬಿಬಿಎಂಪಿಯಲ್ಲಿ ಗುತ್ತಿಗೆದಾರರು ಮೇಲುಗೈ ಸಾಧಿಸುತ್ತಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, 2017ರಲ್ಲಿ 151 ಪ್ಯಾಕೇಜ್ ಗಳಿಗೆ ಟೆಂಡರ್ ಆಹ್ವಾನಿಸಿದರೂ 14 ಬಿಡ್ ಮಾತ್ರ ಬಂದಿತ್ತು. ಹೀಗಾಗಿ ಗುತ್ತಿಗೆದಾರರ ಮಾಫಿಯಾವನ್ನು ಸದೆಬಡಿಯಲು ಗುತ್ತಿಗೆ ಪೌರ ಕಾರ್ಮಿಕರು ಹಾಗೂ ಸಾಗಾಣೆ ವಾಹನ, ಸಲಕರಣೆಯನ್ನು ಪ್ರತ್ಯೇಕ ಟೆಂಡರ್ ನೀಡಲು ಮುಂದಾದರು. ಈ ವೇಳೆಯೂ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದ ಹಿನ್ನಲೆಯಲ್ಲಿ 18 ಸಾವಿರ ಗುತ್ತಿಗೆ ಪೌರ ಕಾರ್ಮಿಕರಿಗೂ ಬಿಬಿಎಂಪಿ ವತಿಯಿಂದಲೇ ನೇರ ವೇತನ ಪಾವತಿಗೆ ನಿರ್ಧರಿಸಲಾಯಿತು. ಇದೀಗ ಗುತ್ತಿಗೆದಾರರು ಬಿಬಿಎಂಪಿ ಇಲಾಖಾ ನಿರ್ವಹಣೆಯಡಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಆದರೂ 2017ರ ಮೇ ತಿಂಗಳಿನಲ್ಲಿ ಸಿದ್ಧಪಡಿಸಿರುವ ಮೈಕ್ರೋ ಪ್ಲಾನ್'ನ ಮಾನದಂಡಗಳನ್ನು ಪಾಲನೆ ಮಾಡುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com