ಖಾಸಗಿ ಕೃಷಿ ಕಾಲೇಜು ವಿವಾದ: ಸಿಎಂ ಮಧ್ಯ ಪ್ರವೇಶದ ಬಳಿಕ ಪ್ರತಿಭಟನೆ ಕೈ ಬಿಟ್ಟ ವಿದ್ಯಾರ್ಥಿಗಳು

ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಗರದ ಟೌನ್ ಹಾಲ್ ನಲ್ಲಿ ನಡೆಯುತ್ತಿದ್ದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯನ್ನು ಸಿಎಂ ಕುಮಾರಸ್ವಾಮಿ ಮಧ್ಯ ಪ್ರವೇಶದ ಬಳಿಕ ಹಿಂತೆಗೆದುಕೊಳ್ಳಲಾಗಿದೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು
ಪ್ರತಿಭಟನಾ ನಿರತ ವಿದ್ಯಾರ್ಥಿಗಳು
Updated on: 
ಬೆಂಗಳೂರು: ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಗರದ ಟೌನ್ ಹಾಲ್ ನಲ್ಲಿ ನಡೆಯುತ್ತಿದ್ದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯನ್ನು ಸಿಎಂ ಕುಮಾರಸ್ವಾಮಿ ಮಧ್ಯ ಪ್ರವೇಶದ ಬಳಿಕ ಹಿಂತೆಗೆದುಕೊಳ್ಳಲಾಗಿದೆ.
ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಅನುಮತಿ ನಿರಾಕರಿಸಲು ಆಗ್ರಹಿಸಿ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ತರಗತಿಗಳನ್ನು ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು. ಮಂಗಳವಾರ ನಗರದ ಪುರಭವನದ ಬಳಿ ಜಮಾಯಿಸಿದ ಸಾವಿರಾರು ವಿದ್ಯಾರ್ಥಿಗಳು, ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ನಡೆಸಿ ಖಾಸಗಿ ಕೃಷಿ ಕಾಲೇಜ ಸ್ಥಾಪನೆ ಮಾಡುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ರೈ ಟೆಕ್ನಾಲಜಿ ಮತ್ತು ಕನಕಪುರ ಹಾಗೂ ಚೆನ್ನಪಟ್ಟಣದ ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ನೀಡಬೇಕೆಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಒತ್ತಾಯಿಸಿರುವುದನ್ನು ವಿದ್ಯಾರ್ಥಿಗಳು ಖಂಡಿಸಿದರು.
ರಾಜ್ಯದಲ್ಲಿ ಈಗಾಗಲೇ ಸುಮಾರು ಐದು ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಅಡಿಯಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರವೇ ಕೃಷಿ ಕಾಲೇಜು ತೆರೆಯಬೇಕು ಹಾಗೂ ಕೃಷಿ ಶಿಕ್ಷಣವನ್ನು ಖಾಸಗಿಕರಣಗೊಳಿಸಬಾರದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಖಾಸಗಿ ಕೃಷಿ ಕಾಲೇಜುಗಳಿಂದ ರೈತರಿಗೆ ಯಾವುದೇ ಸೇವೆ ದೊರೆಯುವುದಿಲ್ಲ. ಖಾಸಗಿ ಕಂಪೆನಿಗಳು ಕಡಿಮೆ ಗುಣಮಟ್ಟದ ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತವೆ. ಮಹಾರಾಷ್ಟ್ರದಲ್ಲಿ 175 ಕೃಷಿ ಕಾಲೇಜುಗಳಿದ್ದು, ಅಲ್ಲಿ ಕೃಷಿ ಶಿಕ್ಷಣ ಕಳಪೆ ಗುಣಮಟ್ಟದಿಂದ ಕೂಡಿದೆ. ಜೊತೆಗೆ ಐಸಿಎಆರ್ ಮಾನ್ಯತೆ ರದ್ದಾಗಿದೆ. ರೈ ಟೆಕ್ನಾಲಜಿ ಕಾರ್ಯವೈಖರಿ ಸಮರ್ಪಕವಾಗಿಲ್ಲ. ಈ ಕುರಿತು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಖಾಸಗಿ ಕಾಲೇಜುಗಳ ಪದವಿಯನ್ನು ನೌಕರಿ ನೀಡುವಾಗ ಪರಿಗಣಿಸುವುದಿಲ್ಲ. ಹೀಗಾಗಿ, ಖಾಸಗಿ ಕಾಲೇಜುಗಳನ್ನು ಸ್ಥಾಪಿಸಲು ಸರಕಾರ ಅನುಮತಿ ನೀಡಬಾರದೆಂದು ಆಗ್ರಹಿಸಿದರು.
ಅಂತೆಯೇ ಖಾಸಗಿ ಸಂಸ್ಥೆಗಳು ನೀಡುವ ಡಿಪ್ಲೊಮಾ, ಪದವಿಗಳಿಗೆ ಮಾನ್ಯತೆ ಇಲ್ಲ ಎಂದು ಈಗಾಗಲೇ ಹಲವು ದೂರುಗಳು ಬಂದಿವೆ. ವಿದ್ಯಾರ್ಥಿಗಳಿಂದ ಹೆಚ್ಚು ಶುಲ್ಕ ಪಡೆದು ಅನ್ಯಾಯ ಮಾಡಲಾಗುತ್ತದೆ. ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳಿಂದಲೂ ಅಧಿಕ ಶುಲ್ಕ ಪಡೆಯುವ ಅಪಾಯ ಇದೆ. ಸರಕಾರ ಕೃಷಿ ವಿವಿ ಕಾಯ್ದೆಗೆ ತಿದ್ದುಪಡಿ ತಂದು ಶಾಶ್ವತವಾಗಿ ಖಾಸಗಿ ಕಾಲೇಜುಗಳನ್ನು ಮುಚ್ಚಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಟೌನ್ ಹಾಲ್ ಬಳಿ ಕಾರು ನಿಲ್ಲಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಿಎಂ ಕುಮಾರಸ್ವಾಮಿ
ಇನ್ನು ತಮ್ಮ ಜೆಪಿ ನಗರ ನಿವಾಸದಿಂದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಿಎಂ ಕುಮಾರಸ್ವಾಮಿ ಅವರು, ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಘಟನೆ ನಡೆಯಿತು. ಕುಮಾರಸ್ವಾಮಿಯವರು ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಕೂಡಲೇ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಸೂಚಿಸಿದ ಕುಮಾರಸ್ವಾಮಿಯವರು, ವಿದ್ಯಾರ್ಥಿಗಳ ಬಳಿ ತೆರಳಿ ಸಮಸ್ಯೆ ಕೇಳಿದ್ದಾರೆ. ಬಳಿಕ ತಾವು ವಿದ್ಯಾರ್ಥಿಗಳ ಪರವಾಗಿರುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಇಂದು ಸಂಜೆ ೪ ಗಂಟೆಗೆ ವಿದ್ಯಾರ್ಥಿ ಮುಖಂಡರು ಕಚೇರಿಗೆ ಬಂದು ತಮ್ಮನ್ನು ಕಾಣುವಂತೆ ಸೂಚಿಸಿದ್ದಾರೆ.  'ಈ ಹಿಂದೆ ಖಾಸಗಿ ವಿವಿಗಳಿಗೆ ಮಾನ್ಯತೆ ನೀಡಬಾರದೆಂದು ನಾನೇ ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ. ಈ ಸಂಬಂಧ ಶೀಘ್ರದಲ್ಲಿಯೇ ತಜ್ಞರೊಂದಿಗೆ ಚರ್ಚೆ ನಡೆಸುವುದಾಗಿ' ಕುಮಾರಸ್ವಾಮಿ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com