

ಬೆಂಗಳೂರು: ನಟ ವಿನೋದ್ ರಾಜ್ ಕಾರಿನಿಂದ ಹಣ ದರೋಡೆ ಸೇರಿದಂತೆ ಗಮನ ಬೇರೆಡೆ ಸೆಳೆದು ದರೋಡೆ ಮಾಡುವ ಸರಣಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನೆಲಮಂಗಲ ಪಟ್ಟಣ ಪೊಲೀಸರಿಗೆ ಇದುವರೆಗೆ ಆರೋಪಿಗಳ ಸುಳಿವು ಸಿಕ್ಕಿಲ್ಲ. ಅಪರಿಚಿತ ದುಷ್ಕರ್ಮಿಗಳು ಎರಡು ವಾರಗಳ ಹಿಂದೆ ವಿನೋದ್ ರಾಜ್ ಅವರ ಕಾರಿನಿಂದ ಅವರ ಗಮನ ಬೇರೆಡೆ ಸೆಳೆದು 1 ಲಕ್ಷ ರೂಪಾಯಿ ದೋಚಿದ್ದರು. ಅದೇ ರೀತಿಯ ಮತ್ತೆರಡು ಪ್ರಕರಣಗಳು ಕೂಡ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಸಿಸಿಟಿವಿ ಪರಿಶೀಲನೆ ಆಧಾರದಲ್ಲಿ, ಒಂದೇ ತಂಡ ಇದೇ ರೀತಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಹಣ ದೋಚುವ ಕಾಯಕದಲ್ಲಿ ನೆಲಮಂಗಲ, ಮಾದನಾಯಕನಹಳ್ಳಿ ಮತ್ತು ದಾಬಸ್ ಪೇಟೆ ಸುತ್ತಮುತ್ತ ನಡೆದಿವೆ. ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದ್ದು ಸಮಸ್ಯೆಯನ್ನು ಸದ್ಯದಲ್ಲಿಯೇ ಬಗೆಹರಿಸಲಿದ್ದೇವೆ. ಕಪ್ಪು ಶರ್ಟ್ ಮತ್ತು ಹಣದಿ ಬಣ್ಣದ ಶಾರ್ಟ್ ಧರಿಸಿದ್ದ ಯುವಕನೊಬ್ಬ ನಟ ವಿನೋದ್ ರಾಜ್ ಕಾರಿನಿಂದ ಹಣ ದೋಚಿದ ಬಗ್ಗೆ ಸಿಸಿಟಿವಿ ಪರಿಶೀಲನೆಯಿಂದ ಪತ್ತೆಯಾಗಿದ್ದು ಅದೇ ವ್ಯಕ್ತಿ ಉದ್ಯಮಿಯೊಬ್ಬನ ಬಳಿಯಿಂದ ಹಣ ದೋಚಿದ ಬಗ್ಗೆ ಕೂಡ ಸಿಸಿಟಿವಿ ಪರಿಶೀಲನೆಯಲ್ಲಿ ಕಂಡುಬರುತ್ತಿದೆ. ಪೊಲೀಸರು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದು ನೆಲಮಂಗಲ ಸುತ್ತಮುತ್ತಲಿನವರೇ ಆರೋಪಿಗಳಾಗಿದ್ದಾರೆ ಎಂದು ಅನಿಸುತ್ತದೆ. ಆದರೆ ವಿನೋದ್ ರಾಜ್ ಕಾರಿನಿಂದ ಹಣ ಕಳ್ಳತನ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಕಂಡುಬರದಿದ್ದು ಆರೋಪಿಗಳನ್ನು ಪತ್ತೆಹಚ್ಚಲು ಇನ್ನು ಕೆಲ ದಿನಗಳು ಬೇಕಾಗಬಹುದು ಎಂದು ಪೊಲೀಸರು ಹೇಳುತ್ತಾರೆ.
ತಾವು ದೂರು ಕೊಟ್ಟು ಸುಮಾರು 20 ದಿನಗಳು ಕಳೆದಿರಬಹುದು, ಕೇಸಿನ ಬಗ್ಗೆ ಪೊಲೀಸರು ನನಗೆ ಯಾವುದೇ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿಲ್ಲ. ಇಂತಹ ಪ್ರಕರಣ ಮತ್ತೆ ಮತ್ತೆ ನಡೆಯುತ್ತಿರುವುದು ನಮಗೆ ತುಂಬಾ ಗಾಬರಿಯಾಗುತ್ತಿದೆ. ಪೊಲೀಸರು ಸೂಕ್ತ ಕಾನೂನು ಮತ್ತು ನಿಯಮ ತಂದು ಇಂತಹ ಆರೋಪಿಗಳಿಗೆ ಭಯ ಹುಟ್ಟಿಸಬೇಕು ಎನ್ನುತ್ತಾರೆ.
ಕಳೆದ ಅಕ್ಟೋಬರ್ 9ರಂದು ನಟ ವಿನೋದ್ ರಾಜ್ ಬ್ಯಾಂಕಿನಿಂದ 1 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಕಾರಿನಲ್ಲಿ ಮನೆ ಕಡೆ ಹೊರಟಿದ್ದರು. ದಾರಿಮಧ್ಯೆ ಓರ್ವ ವ್ಯಕ್ತಿ ಕನ್ನಡ ಭಾಷೆಯಲ್ಲಿ ಮಾತನಾಡಿ ಕಾರಿನ ಚಕ್ರ ಪಂಕ್ಚರ್ ಆಗಿದೆ ಎಂದು ಹೇಳಿ ಗಮನ ಬೇರೆಡೆ ಸೆಳೆದು ಕಾರಿನೊಳಗಿದ್ದ ಹಣವನ್ನು ಎಗರಿಸಿ ಪರಾರಿಯಾದನು. ಅದಕ್ಕಿಂತ ಎರಡು ದಿನ ಹಿಂದೆ ಪೆಟ್ರೋಲ್ ಬಂಕ್ ಮಾಲೀಕನೊಬ್ಬನಿಂದ ಇದೇ ರೀತಿ ತಂಡ ಹಣ ಎಗರಿಸಿತ್ತು.