ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆಗೆ ಬಿಬಿಎಂಪಿ ಸಿದ್ಧತೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2020-21ನೇ ಸಾಲಿನ ಆಯವ್ಯಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಡಿಸಲು ಪೂರ್ವ ಸಿದ್ಧತೆ ಆರಂಭಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ನಿರ್ದೇಶನದಂತೆ ಏ.20 ರಂದು ವೀಡಿಯೋ ಕಾನ್ಪರೆನ್ಸ್ ಮೂಲಕ ಮಂಡಿಸುತ್ತಿದ್ದು, ಪಾಲಿಕೆ ಸದಸ್ಯರುಗಳಿಗೆ ಆಯಾ ವಲಯಗಳ ಮಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ಸೇರಲು ಸೂಚಿಸಲಾಗಿದೆ.
ಈ ಸಂಬಂಧ ಇಂದು ಮಹಾಪೌರರಾದ ಗೌತಮ್ ಕುಮಾರ್ ಪಾಲಿಕೆ ಕೇಂದ್ರ ಕಛೇರಿ ಕೆಂಪೇಗೌಡ ಪೌರ ಸಭಾಂಗಣಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು. ನಂತರ, ಎಲ್ಲಾ 8 ವಲಯಗಳ ಜಂಟಿ ಆಯುಕ್ತರ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ವ್ಯವಸ್ಥಿತವಾಗಿ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಕೋವಿಡ್ 19 ಸೋಂಕಿನಿಂದ ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಸಾಕಷ್ಟು ಕುಸಿದಿದ್ದು, ಆದಾಯ ಸಂಗ್ರಹಿಸುವ ಉದ್ದೇಶದಿಂದ “ಬಿ’ ಖಾತೆ ಹೊಂದಿದವರಿಗೆ “ಎ’ ಖಾತೆ ನೀಡುವಂತಹ ಯೋಜನೆ ಪರಿಚಯಿಸುವ ಸಾಧ್ಯತೆ ಇದೆ. ಮುಂದಿನ ಪಾಲಿಕೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ. ಅಕ್ರಮ- ಸಕ್ರಮ ಯೋಜನೆ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿರುವ ಮಧ್ಯೆ “ಬಿ’ ಖಾತಾಗಳನ್ನು “ಎ’ ಖಾತಾಗಳನ್ನಾಗಿ ಪರಿವರ್ತಿಸುವ ಮಹತ್ವದ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ. ನಗರದಲ್ಲಿ 1430 ರೆವಿನ್ಯೂ ಬಡಾವಣೆಗಳಿದ್ದು, ಇಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ರೆವಿನ್ಯೂ ನಿವೇಶನದಾರರಿಗೆ ಈ ತೀರ್ಮಾನ ವರದಾನವಾಗಲಿದೆ.
ಈ ಬಾರಿ ದಿ. ಅನಂತಕುಮಾರ್ ಹೆಸರಿನಲ್ಲಿ 65 ಸಾವಿರ ರೂ. ಮೌಲ್ಯದ ಲ್ಯಾಪ್ಟಾಪ್ ವಿತರಣೆ, 8 ವಲಯಗಳಲ್ಲಿ ಸುಷ್ಮಾಸ್ವರಾಜ್ ಹೆಸರಿನಲ್ಲಿ ಹೈಟೆಕ್ ಆ್ಯಂಬುಲೆನ್ಸ್ ಸೇವೆ ಒದಗಿಸುವುದು, ದೀನದಯಾಳ್ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಆರಂಭಿಸುವ ಚಿಂತನೆಗಳು ಬಜೆಟ್ನಲ್ಲಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ನಗರದ 4 ದಿಕ್ಕುಗಳಲ್ಲಿ ಐಸಿಯು ಒಳಗೊಂಡ 4 ಬೀದಿನಾಯಿಗಳ ಕೆನಲ್ ಸ್ಥಾಪಿಸಲು, 4 ದಿಕ್ಕಿನಲ್ಲಿ ನಾಲ್ಕು ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವ ಬಿಬಿಎಂಪಿ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಲು, ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲು, ಕಸದ ಸಮಸ್ಯೆ ನಿವಾರಣೆಗೆ ಹಾಗೂ ಆರ್ಥಿಕವಾಗಿ ಹಿಂದುಳಿದ, ಸಾಮಾನ್ಯ ವರ್ಗದವರ ಒಂಟಿ ಮನೆ ನಿರ್ಮಾಣ, 75 ವರ್ಷ ಮೇಲ್ಪಟ್ಟ ಆಸಕ್ತ ಕಲಾವಿದರಿಗೆ ಸಹಾಯಧನ ನೀಡುವ ಬಗ್ಗೆ ಹಾಗೂ ಕನ್ನಡ ಪತ್ರಿಕೋದ್ಯಮ ಉಳಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು, ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ವಾಸ್ತವಿಕವಾಗಿರಲಿದ್ದು, ಈ ಬಾರಿ ಬಜೆಟ್ ಗಾತ್ರ 11 ಸಾವಿರ ಕೋಟಿ ರೂ. ಮೀರುವುದಿಲ್ಲ ಎಂದು ಹೇಳಿದ್ದಾರೆ.
ಬಜೆಟ್ ನ ನಿರೀಕ್ಷೆಗಳು
ಕೋವಿಡ್ 19 ತಡೆಗೆ ಪ್ರತಿ ವಾರ್ಡ್ಗೆ ಅನುದಾನ. ಇದಕ್ಕಾಗಿ 50 ಕೋಟಿ ರೂ. ಅನುದಾನ ಮೀಸಲು ಸಾಧ್ಯತೆ
ಬಿಬಿಎಂಪಿಯ ಶಾಲೆಗಳನ್ನು ದೆಹಲಿ ಅಥವಾ ಸ್ಮಾರ್ಟ್ಸಿಟಿ ಮಾದರಿಯಲ್ಲಿ ಅಭಿವೃದ್ಧಿ.
ಪಾಲಿಕೆ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪರಿಚಯ, ಸ್ಮಾರ್ಟ್ ಕ್ಲಾಸ್ಗೆ ಒತ್ತು.
ಪ್ರತಿ ವಲಯಕ್ಕೆ ಒಂದು ಆಂಬುಲೆನ್ಸ್ ಸೇವೆ. ಎಲ್ಲ ವಲಯದಲ್ಲೂ ಡಯಾಲಿಸಿಸ್ ಸೆಂಟರ್ ಸ್ಥಾಪನೆಗೆ ಒತ್ತು.
ಪಾಲಿಕೆ ಆಸ್ತಿ ಗುರುತು ಹಾಗೂ ಕೆರೆಗಳ ರಕ್ಷಣೆಗೆ ಒತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


