ಬೆಂಗಳೂರು: ಜೂಜಾಟದ ಅಡ್ಡೆ ಮೇಲೆ ದಾಳಿ; ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿಗಳಿಂದ ಹಲ್ಲೆ

ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸ್‌ ತಂಡದಲ್ಲಿದ್ದ ಓರ್ವ ಸಿಬ್ಬಂದಿಯ ಮೇಲೆ 12 ಮಂದಿಯ ತಂಡ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಡಿ.ಗುಡಿ ಪ್ರದೇಶದಲ್ಲಿ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸ್‌ ತಂಡದಲ್ಲಿದ್ದ ಓರ್ವ ಸಿಬ್ಬಂದಿಯ ಮೇಲೆ 12 ಮಂದಿಯ ತಂಡ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಡಿ.ಗುಡಿ ಪ್ರದೇಶದಲ್ಲಿ ನಡೆದಿದೆ

ದಾಳಿಯ ವೇಳೆ ಪೊಲೀಸರು ಜೂಜಾಟದ ವಸ್ತುಗಳನ್ನು ವಶಪಡಿಸಿಕೊಂಡು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದು, ಇದರಿಂದ ಜೂಜುಕೋರರು ಪೊಲೀಸರ ಮೇಲೆ ಆಕ್ರೋಶಗೊಂಡಿದ್ದಾರೆ. ಆಗ ಆರೋಪಿಗಳು ಅಲ್ಲಿದ್ದ ಓರ್ವ ಸಿಬ್ಬಂದಿ ಮೇಲೆ ತೀವ್ರವಾಗಿ ಥಳಿಸಿದ್ದಾರೆ

ಡಿ.ಗುಡಿ ಎಂಬಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ಅಲ್ಲಿಗೆ ದಾಳಿ ನಡೆಸಿ ಜೂಜು ದಂಧೆಯನ್ನು ಭೇದಿಸಿತ್ತು. ಪೊಲೀಸ್ ದಾಳಿ ನಡೆಯುತ್ತಿದ್ದಂತೆ ಭಯಭೀತಿಗೊಳಗಾದ ಆರೋಪಿಗಳು ಓಡಿ ಹೋಗಿದ್ದಾರೆ. ಅಷ್ಟರಲ್ಲಿ ಪೊಲೀಸರು ಕೂಡ ಶ್ರಮವಹಿಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯ ಬಳಿಕ ಪೊಲೀಸ್ ತಂಡ ಠಾಣೆಗೆ ಹಿಂದಿರುಗಿದೆ. ಆದರೆ ಓರ್ವ ಸಿಬ್ಬಂದಿ ಇನ್ನೂ ಜೀಪ್ ಹತ್ತುವ ಮೊದಲೇ ವಾಹನ ಹೊರಟಿದೆ. ಇದರಿಂದ ಅವರು ಅಲ್ಲೆ ಬಾಕಿಯಾಗಿದ್ದಾರೆ.

ಪೊಲೀಸರು ಹಿಂದಿರುಗಿದ್ದಾರೆ ಎಂದು ಖಚಿತವಾದ ಬಳಿಕ ಆರೋಪಿಗಳು ಅಲ್ಲಿಗೆ ಧಾವಿಸಿದ್ದಾರೆ. ಅಲ್ಲಿದ್ದ ಓರ್ವ ಪೊಲೀಸ್ ಸಿಬ್ಬಂದಿಯೊಂದಿಗೆ, ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದೀರಿ ಎಂದು ಆರೋಪಿಸಿ ಕಿರುಚಾಡಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಈ ವೇಳೆ 12 ಆರೋಪಿಗಳು ಪೊಲೀಸ್ ಸಿಬ್ಬಂದಿಯನ್ನು ಸುತ್ತುವರಿದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ

ಠಾಣೆಗೆ ಬಂದ ಬಳಿಕ ಸಿಬ್ಬಂದಿ ದೊಡ್ಡಬಸಪ್ಪ ಅವರು ಕಾಣೆಯಾಗಿರುವುದು ಇತರ ಪೊಲೀಸರಿಗೆ ಗೊತ್ತಾಗಿದೆ. ಆಗ ಇಬ್ಬರು ಪೊಲೀಸರು ದಾಳಿ ನಡೆದ ಸ್ಥಳಕ್ಕೆ ಮತ್ತೆ ಹಿಂದಿರುಗಿ, ಅಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಪೊಲೀಸರು ಅಲ್ಲಿದ್ದ ಆರೋಪಿಗಳನ್ನು ವಿಡಿಯೋಗ್ರಾಫ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಗೋಪಾಲ್ (30), ಕೃಷ್ಣಾ (32), ಗುಂಡ (32), ನಾಗೇಶ್ (30) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com