

ಬೆಂಗಳೂರು: ಭಾರತ ಬಂದ್ ಬೆಂಗಳೂರು ನಗರ ಪ್ರದೇಶದ ಜನರ ಮೇಲೆ ನಿನ್ನೆ ಹೆಚ್ಚಿನ ಪರಿಣಾಮ ಬೀರದಿದ್ದಿರಬಹುದು. ಆದರೆ ಹಲವು ರೈತ ಸಂಘಟನೆಗಳ ಸುಮಾರು 10 ಸಾವಿರ ಮಂದಿ ಇಂದು ಅಂದರೆ ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಿಂದ ವಿಧಾನಸೌಧಕ್ಕೆ ರ್ಯಾಲಿ ಹಮ್ಮಿಕೊಂಡಿದ್ದು ಇದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ರೈತಪರ, ಕನ್ನಡಪರ ಸಂಘಟನೆಗಳು ಇಂದಿನ ಜಾಥಾದಲ್ಲಿ ಭಾಗಿಯಾಗಲಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ರ್ಯಾಲಿ ಆರಂಭಿಸಿ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಒಂದು ವೇಳೆ ರಾಜ್ಯಪಾಲರು ಮನವಿ ಸ್ವೀಕರಿಸಲು ಒಪ್ಪದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ಸುಧಾರಣಾ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತಪರ ಸಂಘಟನೆಗಳು ಇಂದು ಬೃಹತ್ ರ್ಯಾಲಿ, ಜಾಥಾ ಹಮ್ಮಿಕೊಂಡಿದ್ದು ಶೇಷಾದ್ರಿ ರಸ್ತೆ, ಟೌನ್ ಹಾಲ್ ಮತ್ತು ಮೈಸೂರು ಬ್ಯಾಂಕ್ ಸರ್ಕಲ್ ಗಳ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ವಿಧಾನಸೌಧಕ್ಕೆ ಮುತ್ತಿಗೆ: ಇಂದಿನ ರ್ಯಾಲಿಯಲ್ಲಿ 5ರಿಂದ 10 ಸಾವಿರ ರೈತರು ಭಾಗವಹಿಸುವ ಸಾಧ್ಯತೆಯಿದ್ದು 10.30 ಸುಮಾರಿಗೆ ಬಿಬಿಬಎಂಪಿ ಕಚೇರಿ ಮುಂಭಾಗದಿಂದ ರ್ಯಾಲಿ ಆರಂಭಿಸಿ ವಿಧಾನಮಂಡಲ ಚಳಿಗಾಲ ಅಧಿವೇಶನ ನಡೆಯುತ್ತಿರುವುದರಿಂದ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆಯಲ್ಲಿ ರೈತರಿದ್ದಾರೆ.
ಇದರಿಂದಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಕೆ ಆರ್ ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಶೇಷಾದ್ರಿ ರಸ್ತೆ, ವಿಧಾನಸೌಧ, ರಾಜಭವನ, ಸ್ವಾತಂತ್ರ್ಯ ಉದ್ಯಾನವನ ಸುತ್ತಮುತ್ತ ತೀವ್ರ ಸಂಚಾರ ದಟ್ಟಣೆ ಏರ್ಪಡುವ ಸಾಧ್ಯತೆಯಿದೆ.