

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನ ವೈರಸ್ ಆರ್ಭಟ ಮುಂದುವರೆದಿದ್ದು, ಕೆಆರ್ ಮಾರುಕಟ್ಟೆ ಪೊಲೀಸ್ ಪೇದೆಗೆ ಕೊರೋನಾ ಸೋಂಕು ಒಕ್ಕರಿಸಿದೆ.
ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಕೆಆರ್ ಮಾರುಕಟ್ಟೆ ಪೊಲೀಸ್ ಪೇದೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಪೇದೆಯ ಸಂಪರ್ಕದಲ್ಲಿದ್ದ 8 ಮಂದಿ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಮೂಲಗಳ ಪ್ರಕಾರ ಪೊಲೀಸ್ ಪೇದೆಯಿಂದ ಪಡೆದಿದ್ದ ಗಂಟಲು ದ್ರವ ಪರೀಕ್ಷಾ ವರದಿ ಇಂದು ಬಂದಿದ್ದು, ಅದರಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಈ ಹಿಂದೆ ಇದೇ ಪೊಲೀಸ್ ಪೇದೆ ಸೋಂಕು ಪೀಡಿತ ಟಿಪ್ಪು ನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೇದೆಯ ಸಂಪರ್ಕದಲ್ಲಿದ್ದ 8 ಮಂದಿ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಇಡೀ ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.
ಲಾಕ್ ಡೌನ್ 5.0ನಲ್ಲಿ ಕೇಂದ್ರ ಸರ್ಕಾರ ಮಾಲ್ ಗಳು ಮತ್ತು ದೇವಾಲಯಗಳಿಗೆ ವಿನಾಯಿತಿ ನೀಡಿತ್ತು. ಹೀಗಾಗಿ ಇಂದು ಕೆಆರ್ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ತೆರೆಯಲಾಗಿತ್ತು. ಆದರೆ ಅದೇ ಮಾರುಕಟ್ಟೆಯ ಪೊಲೀಸ್ ಪೇದೆಗೆ ಕೊರೋನಾ ಸೋಂಕು ಒಕ್ಕರಿಸಿರುವುದು ಇಲ್ಲಿನ ವ್ಯಾಪಾರಸ್ಥರ ಆತಂಕಕ್ಕೆ ಕಾರಣವಾಗಿದೆ.