

ಬೆಂಗಳೂರು: ಆಟೋದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದು, 40 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಾರ್ತಿಕ್ ( 31), ವಿಕ್ಕಿ ಅಲಿಯಾಸ್ ಡ್ರಗ್ಸ್ ವಿಕಾಸ್ (21), ಪ್ರೇಮಕುಮಾರ್ (23) ಗುರ್ತಿಸಲಾಗಿದೆ.
ಬಂಧಿತ ಆರೋಪಿಗಳಿಂದ ರೂ.25 ಲಕ್ಷ ಮೌಲ್ಯದ ಸುಮಾರು 40 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಒಂದು ಆಟೋ, 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀರಾಮಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಈ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಯಶವಂತಪುರದಿಂದ ರೈಲ್ವೆ ಹಳಿ ಪಕ್ಕದ ರಸ್ತೆ ಬಳಿ ಸೆ.29ರಂದು ಸಂಜೆ 5.30ರಲ್ಲಿ ಆಯೋದಲ್ಲಿ ಕಾರ್ತಿಕ್ ತಂಡ ಗಾಂಜಾ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು ಎಂದು ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ಬಂಧನಕ್ಕೊಳಗಾಗಿರುವ ಕಾರ್ತಿಕ್ ವೃತ್ತಿಪರ ಪೆಡ್ಲರ್ ಆಗಿದ್ದು, ಆದನ ವಿರುದ್ಧ ನಗರದಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಗಾಂಜಾ ಮಾರಾಟ ಪ್ರಕರಣದಲ್ಲಿ ಆತನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಜಾಮೀನು ಪಡೆದು ಹೊರ ಬಂದ ನಂತರ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ.
ಕೋರಮಂಗಲದ ಪಬ್ ವೊಂದರಲ್ಲಿ ಡಿಜೆ ಆಗಿದ್ದ ವಿಕ್ಕಿ ಹಾಗೂ ಆನ್'ಲೈನ್ ಕಂಪನಿಯ ಡೆಲಿವರಿ ಬಾಯ್ ಪ್ರೇಮ್ ಕುಮಾರ್ ಮಾದಕ ವಸ್ತು ವ್ಯಸನಿಗಳಾಗಿದ್ದರು, ಕಾರ್ತಿಕ್ ಬಳಿ ಗಾಂಜಾ ಖರೀದಿಸಿ ಸೇವಿಸುತ್ತಿದ್ದರು. ಬಳಿಕ ಅವರಿಗೆ ಹಣದಾಸೆ ತೋರಿಸಿ ದಂಧೆಗೆ ಕಾರ್ತಿಕ್ ಬಳಸಿಕೊಂಡಿದ್ದಾನೆ. ಒಡಿಶಾದಲ್ಲಿ ಗಾಂಜಾ ಖರೀದಿಸಿ ತಂದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಇದೀಗ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ರೂ.30,000 ಬಹುಮಾನ ಘೋಷಣೆ ಮಾಡಿದ್ದಾರೆ.