ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ: ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ಜನತೆ, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ದೂರು ದಾಖಲಿಸುವುದಾದರೂ ಎಲ್ಲಿ?

ಕೊರೋನಾ ವೈರಸ್ ಪರಿಣಾಮ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರಕದೆ ರಾಜ್ಯದಲ್ಲಿನ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. 

ಬೆಂಗಳೂರು: ಕೊರೋನಾ ವೈರಸ್ ಪರಿಣಾಮ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರಕದೆ ರಾಜ್ಯದಲ್ಲಿನ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. 

ಆಸ್ಪತ್ರೆಗಳ ಬೇಜವಾಬ್ದಾರಿತನದ ವರ್ತನೆಯಿಂದಾಗಿ ನಿನ್ನೆ ಕೂಡ ಮೂವರು ಸಕಾಲಕ್ಕೆ ಚಿಕಿತ್ಸೆ ದೊರಕದೆ ಸಾವನ್ನಪ್ಪಿರುವುದು ವರದಿಯಾಗಿದೆ. 

ರೋಗಿಗಳಿಗೆ ಸ್ಪಂದನೆ ನೀಡಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿರುವ ಹೊರತಾಗಿಯೂ ರಾಜ್ಯದಲ್ಲಿ ಪ್ರತೀನಿತ್ಯ ಆಸ್ಪತ್ರೆಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನಕ್ಕೆ ಒಬ್ಬರಲ್ಲ ಒಬ್ಬರು ಸಾವನ್ನಪ್ಪುತ್ತಲೇ ಇದ್ದಾರೆ. ಕೊರೋನಾ ಪರೀಕ್ಷೆಗೊಳಗಾಗಿ ವೈದ್ಯಕೀಯ ವರದಿ ಬಂದರೂ ಕೂಡ ಸಾಕಷ್ಟು ಜನರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಂಪರ್ಕಿಸುತ್ತಿಲ್ಲ. ವರದಿ ಬಂದ ಕೂಡಲೇ ಮನೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಬೇಕು. ಚಿಕಿತ್ಸೆಗಾಗಿ ಹಲವು ಜನರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೂ ಸಿಬ್ಬಂದಿಗಳು ಕರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಸೋಮವಾರ ನಾನು ಕೊರೋನಾ ಪರೀಕ್ಷೆಗೊಳಗಾಗಿದ್ದ. ಬುಧವಾರ ವೈದ್ಯಕೀಯ ವರದಿ ಬಂದಿದ್ದು, ವೈರಸ್ ಇರುವುದು ದೃಢಪಟ್ಟಿತ್ತು. ಶುಕ್ರವಾರ ರಾತ್ರಿಯಾದರೂ ಯಾವುದೇ ಬಿಬಿಎಂಪಿ ಅಧಿಕಾರಿಗಳಾಗಲೀ, ಆರೋಗ್ಯ ಸಿಬ್ಬಂದಿಗಳಾಗಲೀ ನನ್ನನ್ನು ಸಂಪರ್ಕಿಸಲಿಲ್ಲ. ನಾನು ಹೃದಯ ಸಂಬಂಧಿ ಸಮಸ್ಯೆಯನ್ನು ಅನುಭವಿಸುತ್ತಿದ್ದು, 5 ವರ್ಷದ ಪುತ್ರನಿದ್ದಾನೆ. ನನಗೆ ತಿಳಿದ ಎಲ್ಲಾ ಸಹಾಯವಾಣಿ ಸಂಖ್ಯೆ ಅಧಿಕಾರಿಗಳನ್ನು ಸಂಪರ್ಕಿಸಿದೆ. ಯಾವ ಆಸ್ಪತ್ರೆಗೆ ದಾಖಲಾಗಬೇಕೆಂಬ ಮಾಹಿತಿಯೂ ನನಗೆ ತಿಳಿದಿಲ್ಲ ಎಂದು ನಗರದ ನಿವಾಸಿ ಸುಧಾಕರ್ (ಹೆಸರು ಬದಲಿಸಲಾಗಿದೆ) ಎಂಬುವವರು ಹೇಳಿದ್ದಾರೆ. 

ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ಎಂಬುದರ ಕುರಿತು ಬಿಬಿಂಪಿ, ಕೋವಿಡ್-19 ವಾರ್ ರೂಮ್, ಮುಖ್ಯ ಕಾರ್ಯದರ್ಶಿಗಳ ಕಚೇರಿ, ಆರೋಗ್ಯ ಇಲಾಖೆ, ವಿಪತ್ತು ನಿರ್ವಹಣಾ ಘಟಕದ ಬಳಿಯೇ ಮಾಹಿತಿ ಇಲ್ಲ. ಸಾಕಷ್ಟು ಅಧಿಕಾರಿಗಳು ಹಲವಾರು ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ. ಪ್ರಕರಣನ್ನು ನಿಭಾಯಿಸಲು ಪ್ರತ್ಯೇಕ ನಿಯಂತ್ರಣ ಕೊಠಡಿಗಳಿಲ್ಲ. ಹೀಗಾಗಿಯೇ ಸಮಸ್ಯೆ ದೊಡ್ಡದಾಗಿ ಬೆಳೆಯುತ್ತಿದೆ ಎಂದು ಸ್ವತಃ ಹಿರಿಯ ಆರೋಗ್ಯಾಧಿಕಾರಿಯೊಬ್ಬರು ತಮ್ಮಿಂದಾಗುತ್ತಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. 

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಈಗಾಗಲೇ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಆದರೂ, ಅದಾವುದೂ ಕೆಲಸ ಮಾಡುತ್ತಿಲ್ಲ. ಪ್ರತೀನಿತ್ಯ ನನಗೆ 6,000 ದೂರವಾಣಿ ಕರೆಗಳು ಬರುತ್ತವೆ. ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ದದ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ಇಮೇಲ್ ಮಾಡಿ ದೂರು ನೀಡಿ ಎಂದು ಹೇಳಿದ್ದಾರೆ. 

ಇನ್ನು ಮುಖ್ಯ ಕಾರ್ಯದರ್ಶಿಗಳ ಕಚೇರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಅಧಿಕಾರಿಗಳ ವಿರುದ್ಧ ಈ ವರೆಗೂ ದೂರುಗಳು ದಾಖಲಾಗಿಲ್ಲ. ಕೋವಿಡ್-19 ನಿಯಂತ್ರಣ ಕೊಠಡಿಯೇ ದೂರುಗಳನ್ನು ನಿಭಾಯಿಸುತ್ತಿವೆ ಎಂದು ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com