9-12 ತರಗತಿ ಪ್ರಾರಂಭ: ಮೊದಲ ದಿನ ಶೇ.18.33 ವಿದ್ಯಾರ್ಥಿಗಳು ಹಾಜರು

ರಾಜ್ಯಾದ್ಯಂತ ಸೋಮವಾರದಿಂದ ಪ್ರೌಢಸಾಲೆ ಹಾಗೂ ಪಿಯು ಕಾಲೇಜುಗಳಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಮೊದಲ ದಿನವಾದ ಕಾರಣ ಮಕ್ಕಳ ಹಾಜರಾತಿ ಸಾಧಾರಣವಿದ್ದರೂ, ಶಾಲಾ-ಕಾಲೇಜುಗಳ ಆವರಣದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತ್ತು. 
ಮಲ್ಲೇಶ್ವರಂ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗೆ ಗುಲಾಬಿ ನೀಡಿ ಸ್ವಾಗತಿಸುತ್ತಿರುವ ಶಿಕ್ಷಕಿ
ಮಲ್ಲೇಶ್ವರಂ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗೆ ಗುಲಾಬಿ ನೀಡಿ ಸ್ವಾಗತಿಸುತ್ತಿರುವ ಶಿಕ್ಷಕಿ

ಬೆಂಗಳೂರು: ರಾಜ್ಯಾದ್ಯಂತ ಸೋಮವಾರದಿಂದ ಪ್ರೌಢಸಾಲೆ ಹಾಗೂ ಪಿಯು ಕಾಲೇಜುಗಳಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಮೊದಲ ದಿನವಾದ ಕಾರಣ ಮಕ್ಕಳ ಹಾಜರಾತಿ ಸಾಧಾರಣವಿದ್ದರೂ, ಶಾಲಾ-ಕಾಲೇಜುಗಳ ಆವರಣದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತ್ತು. 

ಮೊದಲ ದಿನ 9ನೇ ತರಗತಿಗೆ ಶೇ.13.89ರಷ್ಟು ( ದಾಖಲಾದ 9,61,748 ಮಕ್ಕಳ ಪೈಕಿ 1,33,652 ಹಾಜರಾಗಿದ್ದಾರೆ)ಮಕ್ಕಳು, 10ನೇ ತರಗತಿಗೆ ಶೇ.21 ರಷ್ಟು ಮಕ್ಕಳು ಹಾಗೂ ದ್ವಿತೀಯ ಪಿಯುಸಿಗೆ ಅತೀ ಹೆಚ್ಚು ಶೇ.29.8ರಷ್ಟು (ದಾಖಲಾತಿ ಪಡೆದಿರುವ 6,06,154 ಮಂದಿ ವಿದ್ಯಾರ್ಥಿಗಳ ಪೈಕಿ ನಿನ್ನೆ ಹಾಜರಾದ ವಿದ್ಯಾರ್ಥಿಗಳು 1,76,319) ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಿದ್ದಾರೆ. 

ಇನ್ನು ಪ್ರಥಮ ಪಿಯುಸಿಗೆ ದಾಖಲಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇನ್ನೂ ಭೌತಿಕ ತರಗತಿ ಆರಂಭವಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶಾಲೆ ಹಾಗೂ ಕಾಲೇಜು ಆರಂಭ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಮುಖ್ಯಮಂತ್ರಿ ಬೊಮ್ಮಾಯಿಯವರು ಮಲ್ಲೇಶ್ವರಂ ನಲ್ಲಿರುವ ಶಾಲೆ ಹಾಗೂ ಪಿಯು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಜಿಲ್ಲೆಗಳಲ್ಲೂ ಶಾಲೆಗಳ ಆರಂಭ ಕುರಿತು ಈ ತಿಂಗಳ ಕೊನೆಯ ವಾರದಲ್ಲಿ ತಜ್ಞರೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ನಡುವೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚು ಇರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡಿಲ್ಲ. 

ಕರ್ನಾಟಕದ ಪ್ರಾಥಮಿಕ ಹಾಗೂ ಫ್ರೌಡ ಶಾಲೆಗಳ ನಿರ್ವಹಣೆಯ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಮಾತನಾಡಿ, ಕೆಲವು ಶಾಲೆಗಳಲ್ಲಿ ಹಾಜರಾತಿ ಶೇ.100 ರ ಸಮೀಪದಲ್ಲಿದೆ ಎಂದು ಹೇಳಿದ್ದಾರೆ.

ಸಾಕಷ್ಟು ಪೋಷಕರು ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಆನ್'ಲೈನ್ ತರಗತಿಗೆ ಹೆಚ್ಚಿನ ಒಲವು ತೋರಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಶಾಲೆಗಳು ಶಾಲೆಗಳ ಪುನರಾರಂಭವನ್ನು ಕೆಲ ವಾರಗಳ ಕಾಲ ಮುಂದೂಡಿವೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com