ಬಕ್ರೀದ್: ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ, ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಮುಸ್ಲಿಂ ಬಾಂಧವರ ಪ್ರಮುಖ ಹಬ್ಬವಾಗಿರುವ ಬಕ್ರೀದ್ ಅನ್ನು ಇದೇ ತಿಂಗಳ 21 ರಂದು ಆಚರಿಸಲಾಗುತ್ತಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
Published: 17th July 2021 09:20 AM | Last Updated: 17th July 2021 09:20 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮುಸ್ಲಿಂ ಬಾಂಧವರ ಪ್ರಮುಖ ಹಬ್ಬವಾಗಿರುವ ಬಕ್ರೀದ್ ಅನ್ನು ಇದೇ ತಿಂಗಳ 21 ರಂದು ಆಚರಿಸಲಾಗುತ್ತಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದ್ದು, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಿದೆ. ಮಸೀದಿಗಳಲ್ಲಿ ಒಂದು ಬಾರಿ 50 ಜನರು ಮಾತ್ರ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರವೇ ಹಬ್ಬ ಆಚರಣೆ ಮಾಡಲು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಕೋವಿಡ್-19 ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ಸೋಂಕು ಹರಡುವಿಕೆ ತಡೆಗಟ್ಟಲು ಹೆಚ್ಚಿನ ಜಾಗರೂಕತೆ ಅನುಸರಿಸುವ ಅನಿವಾರ್ಯತೆ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿಷೇಧಿಸಲಾಗಿದೆ.
ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮಾಜ್ ಮಾಡುವಾಗ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಪ್ರಾರ್ಥನೆ ಮಾಡಲು ಮಸೀದಿ ಪ್ರವೇಶಿಸುವ ಮುನ್ನ ದೇಹದ ತಾಪಮಾನ ಪರೀಕ್ಷಿಸಬೇಕು. ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ಪ್ರಾರ್ಥನೆ ಮಾಡಲು ಬೇಕಿರುವ ಮುಸಲ್ಲಾವನ್ನು (ಬಟ್ಟೆ) ಮನೆಯಿಂದಲೇ ತರುವಂತೆ ಸೂಚಿಸಬೇಕು. ಪರಸ್ಪರ ಆಲಿಂಗನ ಮತ್ತು ಹಸ್ತಲಾಘವಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.
ಈ ಹಬ್ಬದಲ್ಲಿ ಪ್ರಾಣಿ ವಧೆ ಮಾಡುವ ಸಂಪ್ರದಾಯ ಇದ್ದು, ಇದಕ್ಕೆ ನಿರ್ಬಂಧ ಹೇರಲಾಗಿದೆ. ಬಕ್ರೀದ್ ಹಬ್ಬದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸಲಾಗಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು, ಆಸ್ಪತ್ರೆಗಳ ಆವರಣಗಳು, ನರ್ಸಿಂಗ್ ಹೋಂಗಳ ಒಳ ಮತ್ತು ಹೊರಾಂಗಣಗಳು, ಶಾಲಾ, ಕಾಲೇಜುಗಳ ಒಳಾಂಗಣ ಮತ್ತು ಹೊರಾಂಗಣ, ಆಟದ ಮೈದಾನ, ಮಸೀದಿ ಮತ್ತು ಇತರೆ ಧಾರ್ಮಿಕ ಸ್ಥಳಗಳು, ಉದ್ಯಾನದ ಒಳಗೆ, ಹೊರಗೆ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿವಧೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.