
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಸಕ್ರಿಯ ಪ್ರರಣಗಳ ಇಳಿಕೆಯಾಗುವುದರ ಜೊತೆ ಜೊತೆಗೆ ಪರೀಕ್ಷೆಗಳ ಸಂಖ್ಯೆ ಕೂಡ ಇಳಿಕೆಯಾಗಿರುವುದು ಕಂಡು ಬಂದಿದೆ.
ಆರಂಭಿಕ ಹಂತದಲ್ಲಿ ಸೋಂಕನ್ನು ಪತ್ತೆಹಚ್ಚಲು ಪರಿಣಾಮಕಾರಿ ರೀತಿಯಲ್ಲಿ ಪರೀಕ್ಷೆ ನಡೆಸುವುದು ಅತ್ಯಗತ್ಯವಾಗಿದೆ. ಆದರೂ, ಪರೀಕ್ಷೆಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಸೆಪ್ಟೆಂಬರ್ 15ರವರೆಗೂ ಹೆಚ್ಚಾಗಿದ್ದ ಪರೀಕ್ಷೆಗಳ ಸಂಖ್ಯೆ ತದನಂತರದ ದಿನಗಳಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಸೆಪ್ಟೆಂಬರ್ 16 ರಂದು, ಕೋವಿಡ್ ಪರೀಕ್ಷೆಗಳ ಸಂಖ್ಯೆ 1,66,006, ನಂತರ ಸೆಪ್ಟೆಂಬರ್ 17 ರಂದು 1,48,496, ಸೆಪ್ಟೆಂಬರ್ 19 ರಂದು 1,38,920, ಸೆಪ್ಟೆಂಬರ್ 20 ರಂದು 1,29,784 ಮತ್ತು ಸೆಪ್ಟೆಂಬರ್ 21 ರಂದು 1,01,549. ಬುಧವಾರ, 1,46,772 ಪರೀಕ್ಷೆಗಳು ನಡೆದಿವೆ.
ಇತ್ತೀಚೆಗಷ್ಟೇ ಸರ್ಕಾರ ಪರೀಕ್ಷಾ ತಂತ್ರವನ್ನು ಬದಲಾಯಿಸಿರುವುದಾಗಿ ತಿಳಿಸಿತ್ತು. ದೈನಂದಿನ ಪರೀಕ್ಷಾ ಗುರಿ 1.75 ಲಕ್ಷವಾಗಿರಬೇಕು ಎಂದು ಹೇಳಿತ್ತು. ಆದರೂ, ಪರೀಕ್ಷೆಗಳ ಸಂಖ್ಯೆ ಇಳಿಕೆಯಾಗಿದೆ.
ಸೆಪ್ಟೆಂಬರ್ 15 ಕ್ಕಿಂತ ಹಿಂದಿನ ದಿನಗಳಲ್ಲೂ ಕೂಡ ಪರೀಕ್ಷೆಗಳ ಸಂಖ್ಯೆ ಕುಸಿದಿರುವುದು ಕಂಡು ಬಂದಿತ್ತು. ಸೆಪ್ಟೆಂಬರ್ 11 ರಂದು 1,19,503 ಪರೀಕ್ಷೆಗಳನ್ನು ನಡೆಸಲಾಗಿತ್ತು. ನಂತರ ಸೆಪ್ಟೆಂಬರ್ 12 ರಂದು 1,00,176, ಸೆಪ್ಟೆಂಬರ್ 13 ರಂದು 1,19,014 ಪರೀಕ್ಷೆಗಳು ಮತ್ತು ಸೆಪ್ಟೆಂಬರ್ 14 ರಂದು 1,06,645 ಪರೀಕ್ಷೆಗಳು ನಡೆದಿದ್ದವು.
ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡದಿರುವುದು ಮುಖ್ಯವಾಗಿದೆ. ಪರೀಕ್ಷೆ ಕಡಿಮೆ ಮಾಡಿದುವುದರಿಂದ ಲಕ್ಷಣ ರಹಿತರು ಹಾಗೂ ರೋಗ ಲಕ್ಷಣ ಇರುವವರು ಪತ್ತೆಯಾಗದೆ ಹೋಗುವ ಸಾಧ್ಯತೆಗಳಿವೆ. ಇದರಿಂತ ಸೋಂಕು ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಪರೀಕ್ಷೆ ನಡೆಸುವುದು ಎರಡೂ ಅತ್ಯಗತ್ಯವಾಗಿದೆ ಎಂದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಿ, ರಾಜ್ಯದಲ್ಲಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳನ್ನು ಕಡಿಮೆ ಮಾಡಲಾಗಿದ್ದು, ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವತ್ತ ಗಮನ ಹರಿಸಲಾಗಿದೆ. ಈ ವರೆಗೂ ರಾಜ್ಯದಲ್ಲಿ 4.64 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 3.77 ಕೋಟಿ ಆರ್'ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದು ಇಡೀ ದೇಶದಲ್ಲಿಯೇ ಅತ್ಯಧಿಕವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಎದುರಾದ ಭಾರೀ ಮಳೆಯಿಂದಾಗಿ ಕಳೆದ ವಾರ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ, ಆದರೆ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲಾಗುತ್ತಿದೆ. ಕೇರಳ ಗಡಿ ಭಾಗದಲ್ಲಿ ಆರ್'ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಆಯೋಗ ನಿರ್ದೇಶಕಿ ಡಾ.ಅರುಂದತಿ ಚಂದ್ರಶೇಖರ್ ಅವರು ಮಾತನಾಡಿ, ಪಾಸಿಟಿವಿಟಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಾದಂತೆ ಸೋಂಕಿತ ಸಂಪರ್ಕ ಪತ್ತೆ ಕೂಡ ಕಡಿಮೆಯಾಗಲಿದೆ. ಒಬ್ಬ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ಕನಿಷ್ಟ 10-15 ಮಂದಿಯನ್ನು ಪರೀಕ್ಷೆಗೊಳಪಡಿಸಬೇಕು. ಗಡಿ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಪರೀಕ್ಷೆಗಳನ್ನು ನಡೆಸಿದರೆ, ಲಕ್ಷಣ ರಹಿತ ವ್ಯಕ್ತಿಗಳು ಪತ್ತೆಯಾಗುತ್ತಾರೆಂದು ಹೇಳಿದ್ದಾರೆ.
ಈ ನಡುವೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತೀನಿತ್ಯ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿಯನ್ನು ನೀಡಲಾಗಿದೆ. ಆದರೂ 50,000-60,000 ಪರೀಕ್ಷೆಗಳ್ನು ನಡೆಸಲಾಗುತ್ತಿದೆ. ಸೆಪ್ಟೆಂಬರ್ 17 ರ ಬಳಿಕ ನಗರದಲ್ಲಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಸೆ.17 ರಂದು 37,179 ಪರೀಕ್ಷೆ ನಡೆಸಲಾಗಿದ್ದರೆ, ಸೆ.18 ರಂದು 49,954, ಸೆ.19 ರಂದು 41,695, ಸೆ.20 ರಂದು 56,108 ಪರೀಕ್ಷೆಗಳನ್ನು ನಡೆಸಲಾಗಿದೆ.