ಬಿಬಿಎಂಪಿ ಅಗ್ನಿ ದುರಂತ: ಗಾಯಾಳುಗಳಿಗೆ ಮುಂದುವರೆದ ಚಿಕಿತ್ಸೆ; ಆರೋಗ್ಯ ಸ್ಥಿತಿ ತಿಳಿಯಲು ಐಸಿಯು ಬಳಿ ಕಾದು ಕುಳಿತ ಕುಟುಂಬಸ್ಥರು!

ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ 9 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಈ ನಡುವಲ್ಲೇ ತಮ್ಮವರ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಕುಟುಂಬಸ್ಥರು ಐಸಿಯು ಬಳಿ ಕಾದು ಕುಳಿತಿದ್ದಾರೆ.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವುದು.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವುದು.

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ 9 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಈ ನಡುವಲ್ಲೇ ತಮ್ಮವರ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಕುಟುಂಬಸ್ಥರು ಐಸಿಯು ಬಳಿ ಕಾದು ಕುಳಿತಿದ್ದಾರೆ.

ಅಗ್ನಿ ದುರಂತದಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮೂವರಲ್ಲಿ ಶಿವಕುಮಾರ್ ಕೂಡ ಒಬ್ಬರಾಗಿದ್ದಾರೆ.

ಶಿವಕುಮಾರ್ ಅವರ ಮುಖ, ಕಾಲು ಹಾಗೂ ಕೈಗಳಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಮುಖದಲ್ಲಿ ಸುಟ್ಟ ಗಾಯಗಳಾಗಿರುವುದರಿಂದ ಆಹಾರ ಸೇವನೆಗೆ ಕಷ್ಟವಾಗುತ್ತಿದೆ. ಕೆಲವೇ ನಿಮಿಷಗಳ ಕಾಲವಷ್ಟೇ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಮೊದಲ ಹಂತದ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಪ್ರಜ್ಞಾಸ್ಥಿತಿಯಲ್ಲಿಯೇ ಇದ್ದಾರೆ. ಆರೋಗ್ಯ ಸ್ಥಿರವಾಗಿದೆ ಎಂದು ಅವರ ಪತ್ನಿ ಹೇಳಿದ್ದಾರೆ.

ಶಿವಕುಮಾರ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಕುಮಾರ್ ಅವರ ಧ್ವನಿ ಸ್ವಲ್ಪ ಕರ್ಕಶವಾಗಿದೆ ಮತ್ತು ಒಲಿಗುರಿಯಾ (ಮೂತ್ರ ವಿಸರ್ಜನೆಯಲ್ಲಿ ತೊಂದರೆ) ಯಿಂದ ಬಳಲುತ್ತಿದ್ದಾರೆ ಎಂದು ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ ರಮೇಶ್ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

ಶಿವಕುಮಾರ್ ಅವರೊಂದಿಗೆ ಗಂಭೀರ ಗಾಯಗಳಿಂದ ಬಳಲುತ್ತಿರುವ ಜ್ಯೋತಿ (26) ಮತ್ತು ಕಿರಣ್ (35) ಅವರಿಗೂ ಎಕ್ಸ್-ರೇ ಮಾಡಿಸಲಾಗಿದೆ. ಜ್ಯೋತಿಯವರ ಮುಖದ ಚರ್ಮ ಬೊಬ್ಬೆ ಬಂದಿದ್ದು, ಉಸಿರಾಟ ಸಮಸ್ಯೆಗಳು ಕಂಡು ಬಂದಿದೆ. ಇನ್ನು ಕಿರಣ್ ಅವರು ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿದ್ದು, ಶನಿವಾರ ಮತ್ತೊಮ್ಮೆ ಡಯಾಲಿಸಿಸ್ ಮಾಡಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ.

ಮತ್ತೊಬ್ಬ ಗಾಯಾಳು ಸಂತೋಷ್ ಕುಮಾರ್ ಅವರ ಸಹೋದರ ಶಶಿಕುಮಾರ್ ಅವರು ಮಾತನಾಡಿ, ಸಂತೋಷ್ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಗಟ್ಟಿ ಪದಾರ್ಥಗಳನ್ನು ಸೇವನೆ ಮಾಡಲು ಅವರಿಗೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಎಲ್ಲಾ ರೋಗಿಗಳನ್ನು 24-48 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು 2-3 ವಾರಗಳ ಕಾಲ ಐಸಿಯುವಿನಲ್ಲಿ ಇರಿಸಬೇಕಾಗುತ್ತದೆ ಎಂದು ಡಾ.ಕೃಷ್ಣಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com