

ಹುಬ್ಬಳ್ಳಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣಾ ಹೊಸ್ತಿಲಿನಲ್ಲಿರುವ ರಾಜ್ಯಕ್ಕೆ ಭೇಟಿ ನೀಡುವುದರಿಂದ ಯಾವುದೇ ಪರಿಣಾಮಗಳಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಯಾವುದೇ ಪರಿಣಾಮ ಬೀರಲಿಲ್ಲ. ಅವರ ಇತ್ತೀಚಿನ ಬೆಳಗಾವಿ ಭೇಟಿ ಕೂಡ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವದ ಕುರಿತು ಲಂಡನ್ ನಲ್ಲಿ ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆ ಬಳಿಕ ರಾಹುಲ್ ಅವರ ಮಾತುಗಳಿಗೆ ರಾಜ್ಯದ ಜನರು ಯಾವುದೇ ಬೆಲೆ ನೀಡುವುದಿಲ್ಲ. ಕಾಂಗ್ರೆಸ್ ನವರು ಯಾವ ಯಾವ ಘೋಷಣೆ ಮಾಡಿದ್ದಾರೆ. ಎಷ್ಟು ಘೋಷಣೆಗಲನ್ನು ಈಡೇರಿಸಿದ್ದಾರೆ ಎಂಬ ಟ್ರ್ಯಾಕ್ ರೆಕಾರ್ಡ್ ಇದೆ. ಒಂದರ ಮೇಲೊಂದು ಬೋಗಸ್ ಗ್ಯಾರಂಟಿ ನೀಡುತ್ತಿರುವ ಕಾಂಗ್ರೆಸ್, ಮಹಿಳೆಯರು, ಯುವಕರಿಗೆ ಯಾಮಾರಿಸುವುದು ಗ್ಯಾರಂಟಿ. ಅವರು ಗ್ಯಾರಂಟಿ ಕಾರ್ಡ್ ಅಲ್ಲ. ಬರೇ ವಿಸಿಟಿಂಗ್ ಕಾರ್ಡ್, ಹಾಗಾಗಿ ಕಾಂಗ್ರೆಸ್ ನಂತೆ ನಾವು ಗ್ಯಾರಂಟಿ ಕಾರ್ಡ್ ಗಳನ್ನು ಕೊಡುವುದಿಲ್ಲ. ಬದಲಾಗಿ ನಮ್ಮ ಕೆಲಸಗಳೇ ಗ್ಯಾರಂಟಿ ಕಾರ್ಡ್ ಇದ್ದಂತೆ ಎಂದು ವ್ಯಾಖ್ಯಾನಿಸಿದರು.
ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನಮಗೆ ಮತ್ತು ಜನಕ್ಕೆ ಗ್ಯಾರಂಟಿ. ಅವುಗಳನ್ನು ಜನರಿಗೆ ಮುಟ್ಟಿಸುವುದೂ ನಮ್ಮ ಗ್ಯಾರಂಟಿ. ಸದ್ಯ ಬೋಗಸ್ ಗ್ಯಾಂಟಿಗಳನ್ನು ಯಾವುವು ಎಂಬುದನ್ನು ಜನತೆ ನಿತ್ಯ ನೋಡುತ್ತಿದ್ದಾರೆಂದು ತಿಳಿಸಿದರು.
ಬಳಿಕ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ವಾಗ್ದಾಳಿ ನಡೆಸಿದ ಅವರು, ಅರ್ಕಾವತಿ ಲೇಔಟ್ ಪುನರ್ನಿರ್ಮಾಣ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ. ಕಾಂಗ್ರೆಸ್ ಸರ್ಕಾರದ ಅವಧಿಯ 59 ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು. ಅವುಗಳಲ್ಲಿ ಕೆಲವನ್ನು ಈಗಾಗಲೇ ತನಿಖೆಗೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಉರಿಗೌಡ ಮತ್ತು ನಂಜೇಗೌಡರ ಕುರಿತು ನಡೆಯುತ್ತಿರುವ ವಿವಾದದ ಕುರಿತು ಮಾತನಾಡಿ, ಉರಿಗೌಡ– ನಂಜೇಗೌಡ ಪ್ರಕರಣದ ಬಗ್ಗೆ ಹೇಳುತ್ತಿಲ್ಲ. ಆದರೆ ಇತಿಹಾಸವನ್ನು ತಿರುಚಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದು, ಸತ್ಯ ಹೇಳಿದರೆ ಕೆಲವರು ತಡೆದುಕೊಳ್ಳುವುದಿಲ್ಲ. ಸಂಶೋಧನೆ ನಡೆದ ನಂತರ ಸತ್ಯ ಹೊರಗೆ ಬರಲಿದೆ ಎಂದರು.
ಚುನಾವಣೆ ನಂತರವೂ ರಾಜ್ಯದಲ್ಲಿ ನಾನೇ ಮತ್ತೆ ನಾನೇ ಸಿಎಂ ಆಗುತ್ತೇನೆಂದು ಇದೇ ವೇಳೆ ಬೊಮ್ಮಾಯಿಯವರು ಹೇಳಿದರು.