

ಬೆಂಗಳೂರು: ನಗರದಲ್ಲಿ 24 ಗಂಟೆಯೊಳಗೆ ಅತಿವೇಗದ ಚಾಲನೆಯಿಂದ ಐವರು ಮೃತಪಟ್ಟಿರುವ ಘಟನೆ ಭಾನುವಾರ ವರದಿಯಾಗಿದೆ.
ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿ ಸೇರಿ ಮೃತಪಟ್ಟು, ಯುವಕನೋರ್ವ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಅರುಣಾಚಲಪ್ರದೇಶ ಮೂಲದ ನೀಲಂ ಯಾಕುಂ (22) ಮತ್ತು ಹೈದರಾಬಾದ್ ಮೂಲಕ ಅಂಕ ಬಾಬು (21) ಮೃತರು. ಬಂಗಾಳ ಮೂಲದ ಅಭಿಷೇಕ್ ಗಂಗೂಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೀಲಂ ಮತ್ತು ಅಭಿಷೇಕ್ ಧಣಿಸಂದ್ರ ಮುಖ್ಯರಸ್ತೆಯ ಪ್ರತಿಷ್ಠಿತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಂಕಬಾಬು ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದ. ಶನಿವಾರ ತಡರಾತ್ರಿ 12.15ರ ಸುಮಾರಿಗೆ ಹಜ್ ಭವನ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಬೆಂಗಳೂರು: ಅಪರಿಚಿತ ವ್ಯಕ್ತಿಯ ಶವ ಪತ್ತೆ, ತನಿಖೆ ಆರಂಭ
ನೀಲಂ ತಿರುಮೇನಹಳ್ಳಿಯ ಮಹಿಳಾ ಪೇಯಿಂಗ್ ಗೆಸ್ಟ್ ನಲ್ಲಿ ಉಳಿದುಕೊಂಡಿದ್ದರು. ಶನಿವಾರ ರಾತ್ರಿ ಕೆಲಸ ಮುಗಿಸಿದ್ದ ನೀಲಂ ಸಹೋದ್ಯೋಗಿ ಅಭಿಷೇಕ್ ಜೊತೆಗೆ ದ್ವಿಚಕ್ರ ವಾಹನದಲ್ಲಿ ಪೇಯಿಂಗ್ ಗೆಸ್ಟ್ ಗೆ ತೆರಳುತ್ತಿದ್ದರು. ಧಣಿಸಂದ್ರ ಮುಖ್ಯರಸ್ತೆಯಲ್ಲಿ ಹಜ್ ಭವನ ದಾಟಿ ಕೊಂಚ ಮುಂದೆ ಹೋಗಿ ಅಭಿಷೇಕ್ ಯುಟರ್ನ್ ತೆಗೆದುಕೊಳ್ಳುವಾದ ಹಿಂದಿನಿಂದ ಕೆಟಿಎಂ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಅಂಕಬಾಬು ಏಕಾಏಕಿ ಅಭಿಷೇಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಎರಡು ದ್ವಿಚಕ್ರ ವಾಹನದ ಮೂವರೂ ಸವಾರರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ನೀಲಂ ತಲೆಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಅಭಿಷೇಕ್ ಹಾಗೂ ಅಂಕ ಬಾಬು ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಲ್ಮೆಟ್ ಧರಿಸದ ಪರಿಣಾಮ ಅಂಕಬಾಬು ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಗಾಯಾಳು ಅಭಿಷೇಕ್ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮತ್ತೊಂದು ಘಟನೆ ಚಿಕ್ಕಪೇಡೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 9.30ಲ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ ಜಯ್ ಸೂರ್ತ ಎಂಬಾತ ಸಾವನ್ನಪ್ಪಿದ್ದಾನೆ.
ಶನಿವಾರ ರಾತ್ರಿ ಹೋಟೆಲ್ ನಲ್ಲಿ ಊಟ ತರುವುದಾಗಿ ಮನೆಯಿಂದ ಬೈಕ್ ನಲ್ಲಿ ಸಿಸಿಬಿ ಜಂಕ್ಷನ್ ಬಳಿ ತೆರಳುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರವಾಹನ, ರಸ್ತೆ ಬದಿ ನಿಂತಿದ್ದ ಐಷರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜಯಸೂರ್ಯ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಪರಿಣಾಮ ತೀವ್ರವಾಗಿ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಮತ್ತೊಂದು ಘಟನೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ಬಂದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಆನೇಕಲ್ ನಿವಾಸಿ ಮಂಜುನಾಥ್ (41) ಎಂದು ಗುರ್ತಿಸಲಾಗಿದೆ. ಪಿತೃಪಕ್ಷದ ಹಿನ್ನೆಲೆಯಲ್ಲಿ ಹೆಸರಘಟ್ಟ ಮುಖ್ಯ ರಸ್ತೆಯ ಸಂಬಂಧಿಕರ ಮನೆಗೆ ಬಂದಿದ್ದರು. ತುಮಕೂರಿನಿಂದ ಹೆಸರಘಟ್ಟ ನಿಲ್ದಾಣಕ್ಕೆ ಬಂದಿದ್ದ ಪತ್ನಿಯನ್ನು ಕರೆತರಲು ಶನಿವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ: 13 ಮಂದಿ ಬಂಧನ
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಬಿಹಾರ ಮೂಲದ ಬೊಮ್ಮನಹಳ್ಳಿ ನಿವಾಸಿ ರಾಜು ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಬೈಕ್ ಹಿಂದೆ ಕುಳಿದಿದ್ದ ರವಿ ಎಂಬುವವರು ಗಾಯಗೊಂಡಿದ್ದಾರೆ.
ರಾಜು ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಪೇಟಿಂಗ್ ಕೆಲಸ ಮುಗಿಸಿ ಮತ್ತೊಬ್ಬ ಪೇಂಟರ್ ರವಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬೊಮ್ಮನಹಳ್ಳಿ ಕಡೆಗೆ ಬರುವಾದ ಎದುರಿನಿಂದ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕೆ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ರಾಜು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.