

ಬೆಂಗಳೂರು: ನೆರೆಯ ಕೇರಳ ರಾಜ್ಯದಿಂದ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದಿದ್ದು, ಸಭೆ ಬಳಿಕ ರಾಜ್ಯ ಸರ್ಕಾರ ಕ್ರಿಸ್'ಮಸ್, ಹೊಸ ವರ್ಷದ ಸಂಭ್ರಮಾಚರಣೆಗ ಕಟ್ಟುನಿಟ್ಟಿನ ಕ್ರಮ ಶಿಫಾರಸು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕೇರಳದಲ್ಲಿ ಸೋಂಕು ಪ್ರಕರಣ ಹೆಚ್ಚಾಗಿರುವುದು ಹಾಗೂ ಹೊಸ ಉಪತಳಿ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ತುರ್ತು ಸಭೆ ನಡೆಸಿ, ಪ್ರಾಥಮಿಕ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಮಂಗಳವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸಭೆ ಸೇರುತ್ತಿದ್ದು, ಸರ್ಕಾರಕ್ಕೆ ಯಾವ ಯಾವ ನಿಯಂತ್ರಣ ಕ್ರಮ ಕೈಗೊಳ್ಳಲು ಸಲಹೆ ನೀಡಲಿದ್ದಾರೆಂಬ ಕುರಿತು ಕುತೂಹಲ ಮೂಡಿದೆ.
ಹೊಸ ವರ್ಷ ಮತ್ತು ಕ್ರಿಸ್‌ಮಸ್ ಹಬ್ಬ ನೋಡಿಕೊಂಡು ಕೊರೊನಾ ಜಾಗೃತಿಗಾಗಿ ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆಯು ಹೊಸ ರೂಪಾಂತರವು ಪ್ರತಿರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವಲ್ಲಿ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ ”ಎಂದು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯರೊಬ್ಬರು ಹೇಳಿದ್ದಾರೆ.
ಸೋಂಕು ಏರಿಕೆ ಕುರಿತು ಭಯಭೀತರಾಗುವ ಅಗತ್ಯವಿಲ್ಲ. ಜನರು ಮಾಸ್ಕ್ ಧರಿಸುವುದು, ಜನದಟ್ಟಣೆ ಇರುವ ಪ್ರದೇಶದಿಂದ ದೂರ ಇರುವುದು ಹಾಗೂ ಕೋವಿಡ್ ಸೂಕ್ತ ನಡವಳಿಕೆಯ್ನು ಅನುಸರಿಸುವುದರಿಂದ ಸೋಂಕಿನಿಂದ ದೂರ ಉಳಿಯಬಹುದು. ಹೊಸ ವರ್ಷ ಸಂಭ್ರಮ ವೇಳೆ ಹೆಚ್ಚೆಚ್ಚು ಜನರು ಸೇರುವುದರಿಂದ ಇದಕ್ಕೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಆಕ್ಟೀವ್ ಕೇಸ್‌ಗಳ ಸಂಖ್ಯೆ 1,300 ಗಡಿ ದಾಟಿದೆ. ಒಂದು ಕಡೆ ಕೇರಳದಲ್ಲೂ ಪ್ರತಿನಿತ್ಯ 300ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿಯೇ ಕೊರೊನಾ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
Advertisement