ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (BMCRI) ಜೀನೋಮಿಕ್ ಅನುಕ್ರಮ ಪರೀಕ್ಷೆಗಾಗಿ ಕಳುಹಿಸಲಾದ ಎರಡನೇ ಸೆಟ್ ಕೋವಿಡ್-19 ಪಾಸಿಟಿವ್ ಮಾದರಿಗಳಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್'ಗಳಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಇಬ್ಬರು ವ್ಯಕ್ತಿಗಳಲ್ಲಿ XBB 1.5 ಮತ್ತು BF.7 ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಕುರಿತ ಮಾಹಿತಿಯನ್ನು ಜೀನೋಮಿಕ್ ಅನುಕ್ರಮ ಪರೀಕ್ಷೆ ನಡೆಸಿದ ತಂಡದಲ್ಲಿರುವ ಡಾ.ಷರೀಫ್ ಡಿಡಿ ಅವರು ಖಚಿತಪಡಿಸಿದ್ದಾರೆ.
ಇಬ್ಬರೂ ಸೋಂಕಿತರು ಅಂತರಾಷ್ಟ್ರೀಯ ಪ್ರಯಾಣಿಕರಲ್ಲ. ಸ್ಥಳೀಯ ಪರೀಕ್ಷೆ ವೇಳೆ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಇಬ್ಬರೂ ಮೂಲತಃ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದವರಾಗಿದ್ದು, 34 ಮತ್ತು 67 ವರ್ಷದ ವಯಸ್ಸಿನವರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಇಬ್ಬರೂ ಕರ್ನಾಟಕದ ಮೂಲ ನಿವಾಸಿಗಳಲ್ಲ. ಹೀಗಾಗಿ ಆಯಾ ಸರ್ಕಾರಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಡಾ.ಷರೀಫ್ ಅವರು ತಿಳಿಸಿದ್ದಾರೆ.
ಕಳೆದ ವಾರ ಜೀನೋಮಿಕ್ ಪರೀಕ್ಷೆಗೆ ಸೋಂಕಿತರ ಮಾದರಿಗಳನ್ನು ಕಳುಹಿಸಲಾಗಿತ್ತು. 2ನೇ ಸೆಟ್ ಪರೀಕ್ಷೆಯಲ್ಲಿ 67 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಇದೀಗ ಸೋಂಕಿತರ ಪತ್ತೆಹಚ್ಚಲು ಮತ್ತು ಅವರ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಮತ್ತು ಕೋವಿಡ್ ಕಣ್ಗಾವಲು ತಂಡಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಎಂಸಿಆರ್‌ಐ ವೈದ್ಯರು ತಿಳಿಸಿದ್ದಾರೆ.
ಜೀನೋಮಿಕ್ ಕಣ್ಗಾವಲು ಪರೀಕ್ಷೆಗೆ ಕಳುಹಿಸಲಾದ 50 ಮಾದರಿಗಳ ಮೊದಲ ಸೆಟ್ ನಲ್ಲಿಯೂ ಇಬ್ಬರು ವ್ಯಕ್ತಿಗಳಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿತ್ತು. XBB ಮತ್ತು BF.7 ವೈರಸ್ ಗಳು ಇಬ್ಬರಲ್ಲಿ ಪತ್ತೆಯಾಗಿತ್ತು.
ನಗರ ಮತ್ತು ರಾಜ್ಯ ಮಟ್ಟದಲ್ಲಿ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಳ ಮಾಡಿದ ಹೊರತಾಗಿಯೂ ದೈನಂದಿನ ಸಕ್ರಿಯ ಪ್ರಕರಣ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಚೀನಾ, ಅಮೆರಿಕಾ, ಜಪಾನ್ ನಲ್ಲಿ ಕಂಡು ಬಂದಂತೆ ಭಾರತದಲ್ಲಿ ಮತ್ತೊಂದು ಕೋವಿಡ್ ಅಲೆ ಎದುರಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
Advertisement