ಬೆಂಗಳೂರು: ಶ್ರಮಿಕ ವರ್ಗದ ಸುರಕ್ಷಿತ ಓಡಾಟಕ್ಕೆ ಘೋಷಿಸಿದ್ದ ಉಚಿತ ಬಸ್ ಪಾಸ್ ಅವಧಿ ಮಾರ್ಚ್ 31ಕ್ಕೇ ಅಂತ್ಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ನೂರಾರು ಪ್ಲಂಬರ್ ಗಳು, ಬಡಗಿಗಳು, ಕಟ್ಟಣ ನಿರ್ಮಾಣ ಕಾರ್ಮಿಕರು ಹೊಸ ಸರ್ಕಾರ ಗ್ಯಾರಂಟಿಗಳ ಜಾರಿಗಾಗಿ ಕಾದು ಕುಳಿತಿದ್ದಾರೆ.
ಪಾಸ್ ಗಳ ಅವಧಿ ಮಾರ್ಚ್ 31ಕ್ಕೆ ಮುಗಿದಿದ್ದರೂ, ಅವುಗಲನ್ನು ನವೀಕರಿಸಲಾಗಿಲ್ಲ. ಪಾಸ್ ಗಳ ಅವಧಿ ವಿಸ್ತರಿಸಿದ್ದೇ ಆದರೆ, ಸ್ವಲ್ಪ ಪ್ರಮಾಣದ ಹಣವನ್ನು ಉಳಿಸಲು ಸಹಾಯವಾಗುತ್ತದೆ ಎಂದು ಕಾರ್ಮಿಕರು ಹೇಳಿದ್ದಾರೆ.
ಪ್ಲಂಬರ್ ಆಗಿ ಕೆಲಸ ಮಾಡುತ್ತಿರುವ ಚಲವಾದಿಪಾಳ್ಯದ ನಿವಾಸಿ ಪುರುಷೋತ್ತಮನ್ ಮಾತನಾಡಿ, ಕಾರ್ಮಿಕ ಇಲಾಖೆ ಮೂಲಕ ಹೆಸರು ನೋಂದಾಯಿಸಿಕೊಂಡ ಬಳಿಕ ಉಚಿತ ಬಿಎಂಟಿಸಿ ಪಾಸ್ ನೀಡಲಾಗಿತ್ತು. 2020ರ ಆಗಸ್ಟ್ ನಿಂದಲೂ ಪಾಸ್ ಬಳಕೆ ಮಾಡುತ್ತಿದ್ದೇನೆ. ಮಾರ್ಚ್ ನಲ್ಲಿ ಪಾಸ್ ಅವಧಿ ಮುಗಿದಿದೆ. ನವೀಕರಣಕ್ಕೆ ಹೋದಾಗ ಉಚಿತ ಪಾಸ್ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿಯಲ್ಲಿ ಉನ್ನತಾಧಿಕಾರಿಗಳ ಮೊರೆ ಹೋದರೂ, ಕಾರ್ಮಿಕ ಇಲಾಖೆಯಿಂದ ಯಾವುದೇ ನಿರ್ದೇಶನಗಳೂ ಬಂದಿಲ್ಲ ಎಂದರು. ಹಲವು ನಕಲಿ ಕಾರ್ಮಿಕರು ಈ ಪಟ್ಟಿಯಲ್ಲಿದ್ದಾರೆಂದು ತಿಳಿಸಿದರು. ಇದೇ ಕಾರಣಕ್ಕೆ ಯೋಜನೆ ನಿಲ್ಲಿಸಲಾಗಿದೆ ಎಂದರು.
ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ಕಿತ್ತು ಹಾಕುವ ಬದಲು ಉಚಿತ ಪಾಸ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇದೀಗ ನನ್ನಂತಹ ಕಾರ್ಮಿಕರು ಪ್ರತಿದಿನ 50 ರೂ.ಗೂ ಹೆಚ್ಚು ಬಣವನ್ನು ಪ್ರಯಾಣಕ್ಕೆ ಖರ್ಚು ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಬಿಎಂಟಿಸಿ ಅಧಿಕಾರಿಗಳು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಯಾವುದೇ ನಿರ್ದೇಶನಗಳು ಬಾರದ ಕಾರಣ ಉಚಿತ ಪಾಸ್‌ಗಳನ್ನು ಸ್ಥಗಿತಗೊಳಿಸಿದ್ದೇವೆಂದು ತಿಳಿಸಿದ್ದಾರೆ.
Advertisement