ಚಾಮುಂಡೇಶ್ವರಿ ಕಾಯ್ದೆ ಜಾರಿ ವಿರುದ್ಧ ಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಮಾಡಲು ಪ್ರಯತ್ನಿಸುತ್ತೇವೆ: ಸಿದ್ದರಾಮಯ್ಯ

ಮೈಸೂರಿನ ಚಾಮುಂಡೇಶ್ವರಿ ಬೆಟ್ಟ, ದೇವಸ್ಥಾನದ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ರಾಜಮನೆತನದವರ ಅಧಿಕಾರ ಮೊಟಕುಗೊಳಿಸುವ 'ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ-2024'.
ಸಿದ್ದರಾಮಯ್ಯ
ಸಿದ್ದರಾಮಯ್ಯPTI
Updated on

ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ಬೆಟ್ಟ, ದೇವಸ್ಥಾನದ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ರಾಜಮನೆತನದವರ ಅಧಿಕಾರ ಮೊಟಕುಗೊಳಿಸುವ 'ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ-2024' ಜಾರಿಗೊಳಿಸದಂತೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶ ತೆರವು ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರ ಜಾರಿ ಮಾಡಿರುವ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-2024ರ ಹಲವು ಸೆಕ್ಷನ್‌ಗಳನ್ನು ಪ್ರಶ್ನಿಸಿ ಮೈಸೂರು ಒಡೆಯರ್‌ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕಾಯ್ದೆಯನ್ನು ಆ.22ರವರೆಗೆ ಜಾರಿಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಫೆಬ್ರವರಿಯಲ್ಲಿ ಅಂಗೀಕರಿಸಲ್ಪಟ್ಟ ಈ ಕಾಯ್ದೆಯು 'ಶ್ರೀ ಚಾಮುಂಡೇಶ್ವರಿ ಕ್ಷೇತ್ರದ' ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯವನ್ನು ಕೈಗೊಳ್ಳಲು ಸ್ವತಂತ್ರ ಶಾಸನಬದ್ಧ ಪ್ರಾಧಿಕಾರ ರಚಿಸುವ ಗುರಿಯನ್ನು ಹೊಂದಿದೆ. ಇನ್ನು ಕಾನೂನಾತ್ಮಕವಾಗಿ ಹೈಕೋರ್ಟ್ ತಡೆ ತೆರವು ಮಾಡಲು ಪ್ರಯತ್ನಿಸುತ್ತೇವೆ ಎಂದು ಕೊಪ್ಪಳದಲ್ಲಿ ಸುದ್ದಿಗಾರರಿಗೆ ಸಿದ್ದರಾಮಯ್ಯ ತಿಳಿಸಿದರು.

ಇನ್ನು ಗೃಹ ಸಚಿವ ಜಿ ಪರಮೇಶ್ವರ ಅವರು, ಕೆಲವು ದೇವಸ್ಥಾನಗಳಲ್ಲಿ ಪರಿಣಾಮಕಾರಿ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಆ ಪ್ರಾಧಿಕಾರದ ರಚನೆಯ ಸಂಪೂರ್ಣ ಅಧಿಕಾರ ಸರ್ಕಾರದ ಹಿಡಿತದಲ್ಲಿರುತ್ತದೆ. ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಲಿದ್ದಾರೆ. ಪದಾಧಿಕಾರಿಗಳಾಗಿ ಸ್ಥಳೀಯ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಇರಲಿದ್ದಾರೆ. ಹೀಗಾಗಿ ಸರ್ಕಾರದ ಬಳಿ ಅಧಿಕಾರವಿದ್ದರೆ ಪ್ರಯೋಜನವಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಸಿದ್ದರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಅಸಂವಿಧಾನಿಕ: ಪ್ರಮೋದಾ ದೇವಿ

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಅಭಿವೃದ್ಧಿ ಮತ್ತು ನಿರ್ವಹಣೆಯ ನೆಪದಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಚಾಮುಂಡಿ ಬೆಟ್ಟದ ಇತರ ದೇವಾಲಯಗಳ ಮಾಲೀಕತ್ವ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಇದನ್ನು ಜಾರಿಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ. ಇನ್ನು ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಕರ್ನಾಟಕ ಸರ್ಕಾರ ಮತ್ತು ಹಿಂದಿನ ರಾಜಮನೆತನದ ನಡುವಿನ ದೀರ್ಘಕಾಲದ ಕಾನೂನು ವಿವಾದಗಳಲ್ಲಿ ಒಂದಾಗಿದೆ.

ಪ್ರಮೋದಾ ದೇವಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಈ ಕಾಯ್ದೆ ಅಸಾಂವಿಧಾನಿಕವಾಗಿದೆ. ಹಲವಾರು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ದೇವಸ್ಥಾನದ ಆಡಳಿತದಿಂದ ರಾಜಮನೆತನದವರು ಹೊಂದಿರುವ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಈ ಕಾಯಿದೆ ರೂಪಿಸಿ ಜಾರಿಗೆ ತರಲು ಉದ್ದೇಶಿಸಿದೆ. ಆದ್ದರಿಂದ ಕಾಯಿದೆಯನ್ನು ಸಂವಿಧಾನಬಾಹಿರ ಹಾಗೂ ಅಕ್ರಮ ಎಂಬುದಾಗಿ ಘೋಷಿಸಬೇಕು ಎಂದು ಪ್ರಮೋದಾ ದೇವಿ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನವು ಮೈಸೂರಿನಿಂದ ಸುಮಾರು 13 ಕಿಮೀ ದೂರದಲ್ಲಿ 'ಚಾಮುಂಡಿ ಬೆಟ್ಟದ' ಮೇಲಿದೆ. 1,000 ವರ್ಷಗಳಷ್ಟು ಹಳೆಯದಾದ ದೇವಾಲಯವು ಶತಮಾನಗಳಿಂದಲೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮೈಸೂರು ಮಹಾರಾಜರು, ಒಡೆಯರ್‌ಗಳು 1399 CE ನಲ್ಲಿ ಅಧಿಕಾರಕ್ಕೆ ಬಂದ ನಂತರ ದೇವಸ್ಥಾನ ಹೆಚ್ಚು ಮಹತ್ವ ಪಡೆದುಕೊಂಡಿತು. ಚಾಮುಂಡೇಶ್ವರಿಯ ಮಹಾನ್ ಭಕ್ತರು ಮತ್ತು ಆರಾಧಕರಾಗಿದ್ದರು. ಅವರು ತಮ್ಮ ಮನೆ ದೇವತೆಯಂತೆ ಚಾಮುಂಡಿ ತಾಯಿಯನ್ನು ಪೂಜಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com