ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗಾಗಿ ರಾಜ್ಯದಲ್ಲಿ ಸಾಕ್ಷರತಾ ಅಭಿಯಾನ ಆರಂಭ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಯೋಜನೆಯಲ್ಲಿ 6,346 ಜನರಿಗೆ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಮುಖ್ಯವಾಗಿ 5,234 ಚುನಾಯಿತ ಪ್ರತಿನಿಧಿಗಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಔಪಚಾರಿಕ ಶಿಕ್ಷಣದ ಕೊರತೆಯಿರುವ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಮೂಲ ಸಾಕ್ಷರತಾ ಕೌಶಲ್ಯವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಸಾಕ್ಷರ ಸನ್ಮಾನ’ (ಸಾಕ್ಷರತೆ ಗೌರವ) ಕಾರ್ಯಕ್ರಮವನ್ನು ಸೆಪ್ಟೆಂಬರ್ 1 ರಿಂದ ಆರಂಭಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಯೋಜನೆಯಲ್ಲಿ 6,346 ಜನರಿಗೆ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಮುಖ್ಯವಾಗಿ 5,234 ಚುನಾಯಿತ ಪ್ರತಿನಿಧಿಗಳಿದ್ದಾರೆ.

ಈ ಕಾರ್ಯಕ್ರಮವನ್ನು ಕೌಶಲ್ಯಗಳನ್ನು ಒದಗಿಸಲು ಮಾತ್ರವಲ್ಲದೆ ಕರ್ನಾಟಕದ ಮೇಲೆ ಗಣನೀಯವಾಗಿ ಪರಿಣಾಮ ಬೀರುವ ನಿರಂತರ ಸವಾಲನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿದೆ. ರಾಜ್ಯದ 94,775 ಚುನಾಯಿತ ಗ್ರಾಮ ಪಂಚಾಯತ್ ಪ್ರತಿನಿಧಿಗಳಲ್ಲಿ ಹತ್ತರಲ್ಲಿ ಒಬ್ಬರು ಮೂಲಭೂತ ಸಾಕ್ಷರತೆಯ ಕೊರತೆಯಿದೆ. ಇವರಲ್ಲಿ 7,277 ಮಹಿಳೆಯರು ಸೇರಿದಂತೆ 9,357 ಮಂದಿಗೆ ಓದಲು ಮತ್ತು ಬರೆಯಲು ಬರುವುದಿಲ್ಲ. ಹಾಗಾಗಿ ಈ ಮಹಿಳೆಯರಿಗೆ ಸ್ಥಳೀಯ ಆಡಳಿತದಲ್ಲಿ ಬುದ್ಧಿವಂತಿಕೆಯಿಂದ ಭಾಗವಹಿಸಲು ಮತ್ತು ಸ್ಥಳೀಯವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅಗತ್ಯವಿರುವ ಸಾಧನಗಳನ್ನು ನೀಡುವುದು ಕಾರ್ಯಕ್ರಮದ ಒತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ
'ವಯಸ್ಕರ ಸಾಕ್ಷರತಾ ಕಾರ್ಯಕ್ರಮ' ಯಶಸ್ವಿಯಾಗಲು ಮಾರ್ಗದರ್ಶನದ ಅಗತ್ಯವಿದೆ: ತಜ್ಞರು

ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಓದುವುದು, ಬರೆಯುವುದು ಮತ್ತು ಅಂಕಗಣಿತದ ಶಿಕ್ಷಣವನ್ನು ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಪಂಚಾಯತ್‌ಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಓದುವ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಪ್ರಮುಖ ಉದ್ದೇಶವಾಗಿದೆ.

ಆಡಳಿತ ಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ಗ್ರಾಮ ಪಂಚಾಯಿತಿ ಸಭೆ ಮತ್ತು ಗ್ರಾಮಗಳಲ್ಲಿ ಸಕ್ರಿಯ ಭಾಗವಹಿಸುವುದನ್ನು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಾರ್ಯಕ್ರಮವನ್ನು 21 ಜಿಲ್ಲೆಗಳಲ್ಲಿ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 20 ರವರೆಗೆ ನಡೆಸಲಾಗುವುದು. ಪ್ರತಿದಿನ ಎರಡು ಗಂಟೆಗಳ ಕಾಲ ಸಾಕ್ಷರತಾ ತರಬೇತಿ, 50 ದಿನಗಳಲ್ಲಿ 100 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ. ಶಿಕ್ಷಕರಿಗೆ ಗೌರವಧನ ಮತ್ತು ಭಾಗವಹಿಸುವವರಿಗೆ ಪ್ರಮಾಣಪತ್ರ ಮತ್ತು ಗೌರವಧನವನ್ನು ನೀಡಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com