ಬೆಂಗಳೂರು: ತನ್ನ ಬಳಿ ರಾಯಲ್ ಎನ್ ಫೀಲ್ಡ್ ಬೈಕ್ ಇಲ್ಲ ಎಂಬ ಕಾರಣಕ್ಕೆ ಮತ್ತೊಬ್ಬರ ಬೈಕ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಯೊಬ್ಬನನ್ನು ಪೀಣ್ಯ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ಮಹಾಲಕ್ಷ್ಮಿಪುರಂ ನಿವಾಸಿ ಪುಲಕಿತ್ (25) ಎಂದು ಗುರುತಿಸಲಾಗಿದೆ. ಈತ ಎಂಎಸ್'ಸಿ ಪದವಿ ಪಡೆದಿದ್ದರೂ, ನಿರುದ್ಯೋಗಿದ್ದ. ಆರೋಪಿ ಎಚ್‌ಎಂಟಿ ಲೇಔಟ್‌ನಲ್ಲಿರುವ ಪಿಜಿ ವಸತಿಗೃಹದ ಹೊರಗೆ ನಿಲ್ಲಿಸಿದ್ದ ಮೂರು ಬುಲೆಟ್‌ಗಳಿಗೆ ಬೆಂಕಿ ಹಚ್ಚಿದ್ದ. ಬೆಂಕಿ ಹಚ್ಚಲು ಅದೇ ಬೈಕ್ ನಲ್ಲಿದ್ದ ಪೆಟ್ರೋಲ್ ಬಳಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ವಾಹನದ ಮಾಲೀಕರಲ್ಲಿ ಒಬ್ಬರಾಗಿರುವ ದೀಪಾಂಶು ಅಗರ್ವಾಲ್ ಎಂಬುವವರು ದೂರು ದಾಖಲಿಸಿದ್ದರು. ದೂರು ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಯಶವಂತಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೀಪಾಂಶು ಅಗರ್ವಾಲ್ ಕಳೆದ ಒಂದು ವರ್ಷದಿಂದ ಎಚ್‌ಎಂಟಿ ಲೇಔಟ್‌ನ ಪಜಲ್ಸ್ ಲಿವಿಂಗ್ ಬ್ರವಾಡೋ ಹೌಸ್ ಪಿಜಿಯಲ್ಲಿ ನೆಲೆಸಿದ್ದಾನೆ. ದೀಪಾಂಶು ಕೆಲ ತಿಂಗಳ ಹಿಂದಶ್ಟೇ ಸೆಕೆಂಡ್ ಹ್ಯಾಂಡ್ ರಾಯಲ್ ಎನ್‌ಫೀಲ್ಟ್ ವಾಹನ ಖರೀದಿಸಿದ್ದರು.
ಸೆ.18ರಂದು ರಾತ್ರಿ 11 ಗಂಟೆಗೆ ಪಿಜಿ ಅವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ, ಪಿಜಿಗೆ ತೆರಳಿ ನಿದ್ದೆಗೆ ಜಾರಿದ್ದಾರೆ. ಸೆ.19ರ ಮುಂಜಾನೆ ಸುಮಾರು 2 ಗಂಟೆಗೆ ಪಿಜಿ ಮುಂದೆ ಜನ ಕೂಗಾಡುವ ಶಬ್ದವಾಗಿದ್ದು, ಈ ವೇಳೆ ನಿದ್ದೆಯಿಂದ ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ, ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ ಸೇರಿದಂತೆ ಮೂರು ದ್ವಿಚಕ್ರ ವಾಹನಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ.
ಬಳಿಕ ಸ್ಥಳೀಯರೊಂದಿಗೆ ಸೇರಿಕೊಂಡು ಮರಳು ಹಾಗೂ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ರಾಯಲ್ ಎನ್ ಫೀಲ್ಡ್ ಜೊತೆಗೆ ಇನ್ನೂ ಎರಡು ವಾಹನಗಳು ಸುಟ್ಟು ಹೋಗಿದೆ.
ಘಟನೆ ಬಳಿಕ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಸೆ.19ರಂದು ಮುಂಜಾನೆ ಸುಮಾರು 1.40ಕ್ಕೆ ಅಪರಿಚಿತ ವ್ಯಕ್ತಿ ಪಿಜಿ ಆವರಣಕ್ಕೆ ಬಂದಿದ್ದು, ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ ದಿಂದ ಪೆಟ್ರೋಲ್ ತೆಗೆದು, ಬಳಿಕ ಆ ಪೆಟ್ರೋಲ್ ಅನ್ನು ದ್ವಿಚಕ್ರ ವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿ, ಪರಾರಿಯಾಗಿರುವುದು ಕಂಡು ಬಂದಿದೆ.
ಈ ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆರೋಪಿಯು ನನಗೆ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನದ ಬಗ್ಗೆ ತುಂಬಾ ಆಸೆ ಇತ್ತು. ಆದರೆ, ಖರೀದಿಸಲು ಸಾಧ್ಯವಾಗದೆ ಹತಾಶೆಗೊಂಡಿದ್ದೆ. ಹೀಗಾಗಿ ಪಿಜಿ ಆವರಣದಲ್ಲಿ ನಿಲುಗಡೆ ಮಾಡಿದ್ದ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪೀಣ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement