ಫೆಬ್ರವರಿ 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ; ಮೇಕೆದಾಟು, ಮಹದಾಯಿ ಸೇರಿ ನೀರಾವರಿ ಯೋಜನೆಗಳ ಕುರಿತು ಚರ್ಚೆ- DCM

ಉದಯಪುರ (ರಾಜಸ್ಥಾನ): ಫೆಬ್ರವರಿ 25 ರಂದು ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ಮಾಡಲಿದ್ದು, ಭೇಟಿ ವೇಳೆ ಮೇಕೆದಾಟು, ಮಹದಾಯಿ ಸೇರಿ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಉದಯಪುರದಲ್ಲಿ ಕೆಂದ್ರ ಜಲಶಕ್ತಿ ಸಚಿವಾಲಯ ನಡೆಸುತ್ತಿರುವ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಭಾಗಿಯಾಗಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ಈ ಹಿಂದೆ ಘೋಷಿಸಲಾಗಿರುವ ಅನುದಾನ ಹಾಗೂ ಮಹದಾಯಿ, ಮೇಕೆದಾಟು ಹಾಗೂ ಕೃಷ್ಮಾ ಮೇಲ್ದಂಡೆ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಕೇಂದ್ರ ಸರ್ಕಾರದಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಉದಯಪುರದಲ್ಲಿ ನಡೆದ ನೀರಾವರಿ ಸಚಿವರ ಸಮ್ಮೇಳನವು ಎಲ್ಲ ರಾಜ್ಯಗಳ ಸಚಿವರನ್ನು ಒಗ್ಗೂಡಿಸಿದೆ. ಎಲ್ಲಾ ರಾಜ್ಯಗಳ ಅತ್ಯುತ್ತಮ ನೀರಾವರಿ ವ್ಯವಸ್ಥೆಗಳ ಪರಿಚಯವಾಗಿದೆ. ಇದರ ಜೊತೆಗೆ ನಮ್ಮಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದೆ ಇಡಬಹುದಾಗಿದೆ. ನೀರನ್ನು ಹೇಗೆ ಸಂರಕ್ಷಿಸಬೇಕು, ಮರುಬಳಕೆ ಮಾಡಬೇಕು. ಎಂಬುದು ಈ ಸಮ್ಮೇಳನದ ಉದ್ದೇಶವಾಗಿದೆ. ನಮ್ಮ ಯೋಜನೆಗಳನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜ್ಯಗಳ ನಡುವಣ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು ಎಂದು ತಿಳಿಸಿದರು.
ಸಮ್ಮೇಳನದ ವೇಳೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ನೀರಾವರಿ ಸಚಿವರ ಜತೆ ತುಂಗಭದ್ರಾ ನದಿಯ ನೀರಿನ ಬಳಕೆ ಚರ್ಚೆ ನಡೆಸಲಾಗಿದೆ. ತುಂಗಭದ್ರಾ ನದಿಯ 30 ಟಿಎಂಸಿ ನೀರನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಲು ವಿಜಯವಾಡಕ್ಕೆ ಹೋಗಿ ಮತ್ತೊಮ್ಮ ಚರ್ಚೆ ಮಾಡುವುದಾಗಿ ತಿಳಿಸಿದ ಡಿಸಿಎಂ, ಇದಕ್ಕಾಗಿ ಮೂರು ರಾಜ್ಯಗಳು ಸೇರಿ ಕಾರ್ಯತಂತ್ರ ರೂಪಿಸಬೇಕಿದೆ ಎಂದು ಹೇಳಿದರು.
ನೀರಾವರಿಯು ದೇಶದ ಪ್ರಮುಖ ಕ್ಷೇತ್ರವಾಗಿದೆ. ರೈತರು, ಕೈಗಾರಿಕೆಗಳು, ಕುಡಿಯುವ ನೀರು ಹಾಗೂ ನಗರೀಕರಣಕ್ಕೆ ನೀರಾವರಿ ಯೋಜನೆ ಅಗತ್ಯವಾಗಿದೆ. ಹೀಗಾಗಿ ಜಲಶಕ್ತಿ ಸಚಿವಾಲಯ ದೇಶದಲ್ಲಿ ಸ್ಪಷ್ಟವಾದ ನೀಲನಕ್ಷೆ ಹಾಗೂ ಮಾರ್ಗಸೂಚಿ ರೂಪಿಸಬೇಕಿದೆ. ಜತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



