2024-25ನೇ ಸಾಲಿನ SSLC-1 ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಈ ವರ್ಷ ಶೇ. 66.14ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ SSLC ಫಲಿತಾಂಶವನ್ನು ಪ್ರಕಟಿಸಿದರು. ಶೇ. 91.12ರಷ್ಟು ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಶೇ.89.96ರಷ್ಟು ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ದ್ವಿತೀಯ, ಶೇ. 83.19 ಫಲಿತಾಂಶದೊಂದಿಗೆ ಉತ್ತರ ಕನ್ನಡ ತೃತೀಯ, ಶೇ.82.29 ರಷ್ಟು ಫಲಿತಾಂಶದೊಂದಿಗೆ ಶಿವಮೊಗ್ಗ ನಾಲ್ಕನೇ ಸ್ಥಾನ ಹಾಗೂ ಶೇ. 42.43 ಫಲಿತಾಂಶದೊಂದಿಗೆ ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಈ ವರ್ಷ ರಾಜ್ಯದಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಇಂದಿನಿಂದ ಮೇ-7 ರವರೆಗೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಇರಲಿದೆ. ಮೇ 4 ರಿಂದ 11ನೇ ತಾರೀಖಿನವರೆಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಮೂಳೆ ಕ್ಯಾನ್ಸರ್ ವಿರುದ್ಧ ಹೋರಾಡಿದ ಬೆಂಗಳೂರಿನ ಚಿರಂತನ್ ಹೊನ್ನಾಪುರ ಐಸಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 92 ಅಂಕ ಗಳಿಸಿರುವುದು ವಿಶೇಷವಾಗಿದೆ.
ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸುಹಾಸ್ ಶೆಟ್ಟಿಯನ್ನು ಗುರುವಾರ ರಾತ್ರಿ 8.27 ರ ಸುಮಾರಿಗೆ ಮಂಗಳೂರಿನ ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಕಾರ್ಯಕರ್ತರಾಗಿದ್ದರು ಮತ್ತು ಅವರ ವಿರುದ್ಧ ಹಲವು ಕೊಲೆ ಪ್ರಯತ್ನದ ಪ್ರಕರಣಗಳು ದಾಖಲಾಗಿದ್ದವು. ಸುಹಾಸ್ ಶೆಟ್ಟಿ ಕೊಲೆಗೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಆರೋಪವನ್ನು ತಳ್ಳಿಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮೇಲ್ನೋಟಕ್ಕೆ ಈ ಕೃತ್ಯ ಹಳೆ ದ್ವೇಷಕ್ಕೆ ನಡೆದಂತೆ ಕಂಡು ಬಂದರೂ ಇದರ ಹಿಂದಿನ ಉದ್ದೇಶ ಕರಾವಳಿಯಲ್ಲಿ ಶಾಂತಿ ಭಂಗ ಮಾಡುವಂತಿದೆ. ಹಾಗಾಗಿ ಈ ಕೃತ್ಯ ಎಸಗಿದ ಕ್ರಿಮಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಇಲ್ಲಿ ಯಾರ ಓಲೈಕೆಯೂ ಇಲ್ಲ. ಯಾರ ತುಷ್ಠೀಕರಣವೂ ಇಲ್ಲ ಎಂದು ಹೇಳಿದ್ದಾರೆ. ಸುಹಾಸ್ ಹತ್ಯೆ ಪ್ರಕರಣ ಬೆನ್ನಲ್ಲೇ ಮಂಗಳೂರು ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸೆಕ್ಷನ್ 163 ಜಾರಿಗೊಳಿಸಲಾಗಿದೆ.
ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಪಾಟೀಲ್ ಹೆಸರು ಇಟ್ಟುಕೊಂಡು ಚುನಾವಣೆ ಗೆದ್ದಿದ್ದಾರೆ. ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂಬ ಯತ್ನಾಳ್ ಸವಾಲವನ್ನು ಸ್ವೀಕರಿಸಿರುವ ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಯುಟಿ ಖಾದರ್ ಗೆ ರಾಜೀನಾಮೆ ಪತ್ರ ನೀಡಿರುವ ಶಿವಾನಂದ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿವಾನಂದ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಶುಕ್ರವಾರ ಹಸ್ತಾಂತರಿಸಿದ್ದಾರೆ. ಆದರೆ ರಾಜೀನಾಮೆ ಪತ್ರ ಸರಿಯಾದ ಕ್ರಮದಲ್ಲಿ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಇ-ಮೇಲ್ ಗೆ ಬೆದರಿಕೆ ಸಂದೇಶ ಬಂದಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇದೇ ಮಾದರಿಯಲ್ಲಿ ರಾಯಚೂರು ಜಿಲ್ಲಾಧಿಕಾರಿ ಕಚೇರಿಗೂ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಬಾಂಬ್ ಶೋಧಕಾರ್ಯದಲ್ಲಿ ತೊಡಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಹೇಳನಕಾರಿ ಪದ ಬಳಕೆ ಪ್ರಕರಣ ಸಂಬಂಧ ಬಿಜೆಪಿ ಎಂಎಲ್ಸಿ ಸಿಟಿ ರವಿಗೆ ಹಿನ್ನಡೆಯಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ದೂರು ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾ ಮಾಡಿದೆ. ಇದು ಶಾಸನ ಸಭೆಯ ವಿನಾಯಿತಿಗೆ ಒಳಪಡುವುದಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
Advertisement